ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪರ ಪ್ರಚಾರಕ್ಕೆ ಆಗಮಿಸಿದ್ದ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಹಾಗೂ ಪತ್ನಿ ಗೀತಾ ಅವರೊಂದಿಗೆ ಶನಿವಾರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದು ನಂತರ ವಿವಿಧ ಕಡೆಗೆ ರೋಡ್ ಶೋ ನಡೆಸಿದರು.
ಸುಳೇಭಾವಿಯಲ್ಲಿ ಸಂಜೆ 4 ಗಂಟೆಯಿಂದಲೇ ಜನರು ಶಿವಣ್ಣ ಅವರಿಗಾಗಿ ಕಾದು ಕುಳಿತಿದ್ದರು. ಜನಸಾಗರವೇ ಹರಿದು ಬಂದು ಶಿವಣ್ಣನನ್ನು ನೋಡಿ ಕಣ್ತುಂಬಿಕೊಂಡರು.
ಅಲ್ಲಿಂದ ಶಿಂಧೋಳ್ಳಿಗೆ ಆಗಮಿಸಿ ರೋಡ್ ಶೋ ನಡೆಸಿದರು. ರೋಡ್ ಶೋ ವೇಳೆ ನಾನಿರುವುದೇ ನಿಮಗಾಗಿ…. ಬೊಂಬೆ ಹೇಳುತೈತಿ… ಯಾರೇ ಕೂಗಾಡಲಿ ಹಾಡು ಹೇಳು ಮೂಲಕ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದರು.
ಈ ವೇಳೆ ಮಾತನಾಡಿದ ಶಿವಣ್ಣ, ದೇವರ ಆಶಿರ್ವಾದ, ನಿಮ್ಮೆಲ್ಲರ ಆಶಿರ್ವಾದದಿಂದ ಲಕ್ಷ್ಮೀ ಹೆಬ್ಬಾಳಕರ ಗೆಲ್ಲುವುದು ಖಚಿತ. ಅವರು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುತ್ತಾರೆ. ಅವರಿಗೆ ನಿಮ್ಮ ಆಶಿರ್ವಾದ ಹೀಗೆಯೇ ಇರಲಿ ಎಂದು ಕೋರಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಇನ್ನು ನಾಲ್ಕೇ ದಿನದಲ್ಲಿ ಚುನಾವಣೆ ನಡೆಯಲಿದೆ. ನನಗೆ ಆಶಿರ್ವಾದ ಮಾಡಿ, ನಾವೆಲ್ಲರೂ ಸೇರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸೋಣ ಎಂದು ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾರಹಾಕಿ ಗೌರವಿಸಿದರು. ನಂತರ ಹೊನ್ನಿಹಾಳದಲ್ಲಿಯೂ ಭಾರೀ ಜನಸ್ತೋಮದ ಮಧ್ಯೆ ಶಿವರಾಜಕುಮಾರ ಅವರಿಂದ ರೋಡ್ ಶೋ ನಡೆಯಿತು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ಮಹೇಶ ಸುಗಣೆನ್ನವರ, ಬಸನಗೌಡ ಹುಂಕರಿಪಾಟೀಲ, ಮೃಣಾಲ್ ಹೆಬ್ಬಾಳಕರ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಗಂಗಣ್ಣ ಕಲ್ಲೂರ, ಬಸವರಾಜ ಮ್ಯಾಗೋಟಿ, ನೀಲೇಶ ಚಂದಗಡಕರ, ರಜತ ಉಳ್ಳಾಗಡ್ಡಿಮಠ ಇತರರು ಇದ್ದರು.
ತಂಗಿ ನಿನ್ನ ನಗುವಲ್ಲೊಂದು ಪುಟ್ಟ ನಗುವಿದೆ…ಹಾಡಿನ ಮೂಲಕ ಲಕ್ಷ್ಮೀ ಗೆ ಶಿವಣ್ಣ ಹಾರೈಕೆ
ಶಿವಣ್ಣ ಶ್ರೀ ಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿದರು. ಸುಳೇಭಾವಿಗೆ ಶಿವರಾಜ ಕುಮಾರ ಆಗಮಿಸುತ್ತಿದ್ದಂತೆ ಸೇರಿದ್ದ ಜನಸ್ತೋಮ ಶಿವರಾಜ ಕುಮಾರ ಪರ ಹಾಗೂ ಲಕ್ಷ್ಮೀ ಹೆಬ್ಬಾಳಕರ ಪರ ಘೋಷಣೆ ಕೂಗಿದರು. ಶಿವಣ್ಣಗೆ ಜಯವಾಗಲಿ, ಕಾಂಗ್ರೆಸ್ ಗೆ ಜಯವಾಗಲಿ ಎಂಬ ಘೋಷಣೆ ಮೊಳಗಿತು. ನಂತರ ಶಿವಣ್ಣ, ತಂಗಿ ನಿನ್ನ ನಗುವಲ್ಲೊಂದು ಪುಟ್ಟ ನಗುವಿದೆ… ಆ ನಗುವಿಗಾಗಿ ತವರು ಕಾದಿದೆ ಎಂಬ ಹಾಡು ಹಾಡುವ ಮೂಲಕ ಜನರನ್ನು ರಂಜಿಸಿದರು. ಈ ಹಾಡಿನ ಮೂಲಕವೇ ಹೆಬ್ಬಾಳಕರ ಅವರನ್ನು ಹಾರೈಸಿದರು. ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂದು ಹೆಬ್ಬಾಳಕರ ಪರ ಮತಯಾಚಿಸಿದರು.