ಶಿವಸೇನೆ ಪಕ್ಷದ ಚಿಹ್ನೆಗೆ ಸಂಬಂಧಿಸಿದ ಬೇಡಿಕೆಯನ್ನು ಪರಿಗಣಿಸುವ ಮುನ್ನ ನಮ್ಮನ್ನು ಆಲಿಸಿ: ಚುನಾವಣ ಆಯೋಗಕ್ಕೆ ಉದ್ಧವ್ ಬಣ ಮನವಿ 

ನವದೆಹಲಿ: ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಚುನಾವಣಾ ಆಯೋಗದ ಮೆಟ್ಟಿಲೇರಿದ್ದು, ಶಿವಸೇನೆ ಪಕ್ಷದ ಚಿಹ್ನೆಗೆ ಸಂಬಂಧಿಸಿದ ಬೇಡಿಕೆಯನ್ನು ಪರಿಗಣಿಸುವ ಮುನ್ನ ನಮ್ಮನ್ನೂ ಆಲಿಸಿ ಎಂದು ಮನವಿ ಮಾಡಿದೆ. 

ಶಿವಸೇನೆಯ ಏಕನಾಥ್ ಶಿಂಧೆ ಬಣದ ಯಾವುದೇ ಬೇಡಿಕೆಯನ್ನು ಪರಿಗಣಿಸುವ ಮುನ್ನ ನಮ್ಮನ್ನೂ ಆಲಿಸಬೇಕೆಂಬುದು ಉದ್ಧವ್ ಠಾಕ್ರೆ ಬಣದ ಮನವಿಯಾಗಿದೆ. 

ಶಿವಸೇನೆಯ ನಾಯಕ ಅನಿಲ್ ದೇಸಾಯಿ, ಈ ಮನವಿ ಮಾಡಿದ್ದು, ಇದೊಂದು ಮುನ್ನೆಚ್ಚರಿಕಾ ಕ್ರಮವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಕಳೆದ ತಿಂಗಳು ಎಂವಿಎ ಸರ್ಕಾರದಿಂದ ಬಂಡೆದ್ದು 40 ಶಾಸಕರೊಂದಿಗೆ ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದ್ದರು. 

ಏಕನಾಥ್ ಶಿಂಧೆ ಅವರ ಸರ್ಕಾರಕ್ಕೆ 10 ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ. ಜೂ.30 ರಂದು ಬಿಜೆಪಿ-ಏಕನಾಥ್ ಶಿಂಧೆ ಬಣದ ಶಾಸಕರ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿಂಧೆ ತಮ್ಮದೇ ಮೂಲ ಶಿವಸೇನೆ ಎಂಬ ಹಕ್ಕನ್ನು ಮಂಡಿಸಿದ್ದು, ಮೂರನೇ ಎರಡರಷ್ಟು ಶಾಸಕರ ಬೆಂಬಲ ತಮಗೇ ಇದೆ ಎಂದು ಹೇಳಿದ್ದರು. 

ಶಿವಸೇನೆ ಸಂಸದೀಯ ಪಕ್ಷದಲ್ಲೂ ಇಬ್ಭಾಗವಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಕನಿಷ್ಠ 14 ಮಂದಿ ಲೋಕಸಭಾ ಸದಸ್ಯರು ಶಿಂಧೆ ನೇತೃತ್ವದ ಬಣಕ್ಕೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದಾರೆ.

Latest Indian news

Popular Stories