ಶ್ರೀನಿವಾಸ್ ಶೆಟ್ರನ್ನು ಭೇಟಿಯಾದ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ

ಕುಂದಾಪುರ : ಇತ್ತೀಚಿಗೆ ಚುನಾವಣೆ ನಿವೃತ್ತಿ ಘೋಷಿಸಿರುವ ಕುಂದಾಪುರದ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಶನಿವಾರ ಬೆಳಗ್ಗೆ ಬೈಂದೂರು ಬಿಜೆಪಿ ಅಭ್ಯರ್ಥಿ  ಗುರುರಾಜ್ ಗಂಟಿಹೊಳೆ ಅವರು ಹಾಲಾಡಿಯವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪಕ್ಷದ ಹಿರಿಯ ನಾಯಕರು, ಪ್ರಮುಖರು ನನಗೆ ಬೈಂದೂರು ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಮನವಿ‌ ಮಾಡಿದ್ದಾರೆ. ಇದು ನನ್ನ ಕರ್ತವ್ಯವೂ ಹೌದು. ಯುವ ನಾಯಕ ಗುರುರಾಜ್ ಅವರಿಗೆ ನಿಮ್ಮೆಲ್ಲರ ಬೆಂಬಲ, ಸಹಕಾರ ಬೇಕಾಗಿದೆ ಎಂದು ಹೇಳಿದರು.

ಗುರುರಾಜ್ ಗಂಟಿಹೊಳೆ ಮಾತನಾಡಿ, ಹಾಲಾಡಿ ಶ್ರೀನಿವಾಸ ಶೆಟ್ಟರು ನಮಗೆಲ್ಲ ಆದರ್ಶಪ್ರಾಯರು. ಅವರ ಆರ್ಶಿವಾದವನ್ನು ಪಡೆದಿದ್ದೇನೆ. ಅವರ ಬೆಂಬಲ, ಸಹಕಾರವಿಂದು ಸಿಕ್ಕಿದೆ.‌ ಈಗ ನನಗೆ ಧೈರ್ಯ ಬಂದಿದೆ. ಅವರ ಸಾಮಾಜಿಕ ಕೈಂಕರ್ಯ ನಮಗೆಲ್ಲ ಮಾದರಿ ಎಂದು ಹೇಳಿದಲ್ಲದೆ ಬೈಂದೂರು ಹಾಲಿ ಶಾಸಕ ಸುಕುಮಾರ್ ಶೆಟ್ಟರನ್ನು ಭೇಟಿಯಾಗಿದ್ದು, ಅವರು ಸಹ ನಾನಿದ್ದೇನೆ, ಹೆದರಬೇಡ, ಧೈರ್ಯದಿಂದ ಇರು ಎನ್ನುವ ಮಾತನ್ನು ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಗುರುರಾಜ್ ಗಂಟಿ ಹೊಳೆ ಈ ಬಾರಿ ಬೈಂದೂರು ಕ್ಷೇತ್ರದ ಅಚ್ಚರಿಯ ಅಭ್ಯರ್ಥಿಯಾಗಿದ್ದು ಗೋಪಾಲ್ ಪೂಜಾರಿ ಎದುರು ಸೆಣಸಲಿದ್ದಾರೆ‌.

Latest Indian news

Popular Stories