ಸಚಿವ ನವಾಬ್ ಮಲಿಕ್ ವಿರುದ್ಧ ಪೊಲೀಸರಿಗೆ ಸಮೀರ್ ವಾಂಖೆಡೆ ತಂದೆ ದೂರು

ಮುಂಬೈ: ಮಹಾರಾಷ್ಟ್ರ ಸರ್ಕಾರದ ಎನ್ ಸಿಪಿ ಸಚಿವ ನವಾಬ್ ಮಲಿಕ್ ಅವರು ಎನ್ ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಮಾಡುತ್ತಿರುವ ಆರೋಪ ನಿಲ್ಲುತ್ತಿಲ್ಲ. ಈ ಬಗ್ಗೆ ಇದೀಗ ಸಮೀರ್ ವಾಂಖೆಡೆಯವರ ತಂದೆ ಧ್ಯಾನದೇವ್ ವಾಂಖೆಡೆ ಪೊಲೀಸರಿಗೆ ದೂರು ನೀಡಿದ್ದಾರೆ.

ಎನ್ ಸಿಪಿ ಸಚಿವ ನವಾಬ್ ಮಲಿಕ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿರುವ ಧ್ಯಾನದೇವ್ ವಾಂಖೆಡೆ, ತಮ್ಮ, ತಮ್ಮ ಕುಟುಂಬ ಸದಸ್ಯರ ವಿರುದ್ಧ ಮತ್ತು ತಮ್ಮ ಜಾತಿ ವಿರುದ್ಧ ಸುಳ್ಳು ಮತ್ತು ನಿಂದನಕಾರಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂಬೈಯ ಒಶಿವಾರ ವಿಭಾಗೀಯ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ನಿನ್ನೆ ದೂರು ನೀಡಿರುವ ಧ್ಯಾನದೇವ್ ವಾಂಖೆಡೆ ಸಚಿವ ನವಾಬ್ ಮಲಿಕ್ ವಿರುದ್ಧ ಎಸ್ ಸಿ/ಎಸ್ ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎನ್‌ಸಿಪಿ ನಾಯಕ ಮಲಿಕ್ ತನ್ನ ಮತ್ತು ತಮ್ಮ ಕುಟುಂಬ ಸದಸ್ಯರು ವಿರುದ್ಧ, ತಮ್ಮ ಜಾತಿಯ ವಿರುದ್ಧ ವಿವಿಧ ಮಾಧ್ಯಮ ವೇದಿಕೆಗಳಲ್ಲಿ “ಸುಳ್ಳು ಮತ್ತು ಅವಹೇಳನಕಾರಿ” ಟೀಕೆಗಳನ್ನು ಮಾಡಿದ್ದಾರೆ. ನಾವು ಪರಿಶಿಷ್ಟ ಜಾತಿಗೆ ಸೇರಿದ ಮಹಾರ್ ಸಮುದಾಯಕ್ಕೆ ಸೇರಿದವರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಲಿಕ್ ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಯಾಸ್ಮೀನ್ ವಾಂಖೆಡೆ ಅವರು ಆರೋಪಿಸಿದ್ದಾರೆ.

ನನ್ನನ್ನು ಆನ್‌ಲೈನ್‌ನಲ್ಲಿ ಹಿಂಬಾಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ಗಳಲ್ಲಿ ಇತ್ತೀಚೆಗೆ ನಾನು ಪೋಸ್ಟ್‌ ಮಾಡಿದ್ದ ನನ್ನ ವೈಯಕ್ತಿಕ ಫೋಟೋಗಳನ್ನು ಮಾಧ್ಯಮದವರಿಗೆ ಅಕ್ರಮವಾಗಿ ನೀಡುತ್ತಿದ್ದಾರೆ ಎಂದು ಯಾಸ್ಮೀನ್ ದೂರಿದ್ದಾರೆ.

ಕಳೆದ ವಾರ ಯಾಸ್ಮೀನ್ ವಾಂಖೆಡೆಯವರಿಂದ ದೂರು ಸ್ವೀಕರಿಸಿದ್ದೇವೆ. ಆದರೆ, ಇಲ್ಲಿವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ಒಶಿವಾರಾ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ ಹೈ-ಪ್ರೊಫೈಲ್ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಸುಲಿಗೆ ಆರೋಪ ಎದುರಿಸುತ್ತಿರುವ ಸಮೀರ್ ವಾಂಖೆಡೆ ವಿರುದ್ಧ ಇಲಾಖಾ ವಿಜಿಲೆನ್ಸ್ ತನಿಖೆ ನಡೆಯುತ್ತಿದೆ.

Latest Indian news

Popular Stories

error: Content is protected !!