ಸಚಿವ ಸಂಪುಟ ವಿಸ್ತರಿಸುವ ಯಾವುದೇ ಯೋಜನೆಯಿಲ್ಲ – ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ: ದೀಪಾವಳಿ ಆಚರಿಸಲು ಮೂರು ದಿನಗಳ ಕಾಲ ಹುಟ್ಟೂರು ಹುಬ್ಬಳ್ಳಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವ ಸಂಪುಟ ವಿಸ್ತರಣೆ ಮಾಡುವ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನವೆಂಬರ್ 7 ರಂದು ದೆಹಲಿಗೆ ಹೋಗುತ್ತಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮ ಸರ್ಕಾರ 100 ದಿನಗಳು ಪೂರೈಸಿರುವ ಕುರಿತು ಮಾತನಾಡಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಬಗ್ಗೆ ತೆಗೆದುಕೊಂಡ ನಿರ್ಧಾರಗಳು ನನಗೆ ತೃಪ್ತಿ ತಂದಿವೆ ಎಂದು ತಿಳಿಸಿದ್ದಾರೆ. 100 ದಿನಗಳ ಆಡಳಿತದಲ್ಲಿ ರೈತರು, ಬಡವರು, ನಿರ್ಗತಿಕರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಜನಸೇವಕ ಕಾರ್ಯಕ್ರಮ ಜನವರಿ 26ರೊಳಗೆ ಜನರ ಮನೆ ಬಾಗಿಲಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ.

ನನ್ನ ಬಳಿ ಎರಡು ಯೋಜನೆಗಳಿವೆ ಒಂದು ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಸರ್ಕಾರ ಮತ್ತು ಅದರ ಕಾರ್ಯಕ್ರಮಗಳು ಜನರಿಗೆ ತಲುಪುವಂತೆ ನೋಡಿಕೊಳ್ಳುವುದು. ಎರಡನೆಯದು ಆರ್ಥಿಕ ಪ್ರಗತಿಯೊಂದಿಗೆ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಾಗಿದೆ. ಉದಾಹರಣೆಗೆ ರಾಜ್ಯದ ತಲಾ ಆದಾಯ ಇತರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ಮೊದಲ 5ನೇ ಸ್ಥಾನದಲ್ಲಿದ್ದರೂ, ಇದರಲ್ಲಿ ಎಲ್ಲಾ ಜನರ ಕೊಡುಗೆ ಇರಬೇಕು. ಆರ್ಥಿಕ ಬೆಳವಣಿಗೆಯಲ್ಲಿ ಎಸ್’ಸಿ, ಎಸ್’ಟಿ, ಹಿಂದುಳಿದ ವರ್ಗ, ಬಡವರು ಕೂಡ ಪಾಲ್ಗೊಳ್ಳುವಂತಾಗಬೇಕು. ಇದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಿ, ಆರ್ಥಿಕ ನೆರವು ನೀಡಬೇಕು ಅದರಲ್ಲೂ ಹೆಣ್ಣು ಮಕ್ಕಳನ್ನು ಕಾರ್ಯಕ್ರಮಗಳ ಭಾಗವಿಸುವುದು ನಮ್ಮ ಆಶಯ ಎಂದು ನುಡಿದರು.

ಇನ್ನು ಆಡಳಿತ ಸುಧಾರಣೆ ತರಬೇಕು. ಇದಕ್ಕಾಗಿ ಈಗಾಗಲೇ ಸಿಎಂ ಡ್ಯಾಷ್ ಬೋರ್ಡ್ ಮಾಡಿದ್ದೇವೆ. ಎಲ್ಲಾ ಇಲಾಖೆಗಳ ಪ್ರಮುಖ ಯೋಜನೆಗಳ ವರದಿಯನ್ನು ಅದರಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ನಮ್ಮ ಅಧಿಕಾರಿ ವರ್ಗ ಪ್ರತಿದಿನ ಅದನ್ನು ನೋಡುತ್ತಾರೆ. ಆಡಳಿತ ಸುಧಾರಣೆಯನ್ನು ಮೇಲಿನಿಂದ ತಳಮಟ್ಟದವರೆಗೆ ತೆಗೆದುಕೊಂಡು ಹೋಗುವ ಪ್ರಯತ್ನವಿದು. ಪ್ರತಿ 15 ದಿನಕ್ಕೊಂದು ಬಾರಿ ಕೋರ್ಸ್ ಕರೆಕ್ಷನ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಸಿಎಂ ಡ್ಯಾಷ್ ಬೋರ್ಡ್ ಸೃಷ್ಟಿಸಲಾಗಿದೆ ಎಂದು ವಿವರಿಸಿದರು.

Latest Indian news

Popular Stories

error: Content is protected !!