ಬೆಂಗಳೂರು: ಐಪಿಎಸ್ ಡಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಆರೋಪ -ಪ್ರತ್ಯಾರೋಪಗಳು ಮುಂದುವರಿದು ರೋಹಿಣಿ ಸಿಂಧೂರಿಯವರು ನ್ಯಾಯಾಲಯದ ಮೆಟ್ಟಿಲೇರಿ ಕೋರ್ಟ್ ರೂಪಾ ಅವರಿಗೆ ವೈಯಕ್ತಿಕ ವಿಚಾರಗಳು, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕದಂತೆ, ಮಾಧ್ಯಮಗಳಿಗೆ ವೈಯಕ್ತಿಕ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದೆ.
ಇದಕ್ಕೆ ಕೋರ್ಟ್ ಏಕಪಕ್ಷೀಯವಾಗಿ ತೀರ್ಪು ನೀಡದೆ ರೂಪಾ ಅವರಿಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶ ನೀಡಿದ್ದು ಮುಂದಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ಮುಂದೂಡಿದೆ. ರೂಪಾ ಅವರು ಸಹ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಸಮರಕ್ಕೆ ಸಿದ್ಧರಾಗಿದ್ದು, ಕೋರ್ಟ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಬಗ್ಗೆ ನಿನ್ನೆ ಫೇಸ್ ಬುಕ್ ಪೋಸ್ಟ್ ಹಾಕಿರುವ ಅವರು, ಈ ಕಠಿಣ ಸಮಯದಲ್ಲಿ ನನ್ನ ಪರವಾಗಿ ಹಲವು ಸ್ನೇಹಿತರು, ಹಿತೈಷಿಗಳು ನಿಂತಿದ್ದಾರೆ. ಅವರ ಬೆಂಬಲ, ಧೈರ್ಯದ ಮಾತುಗಳಿಂದ ನಾನು ನಿಜಕ್ಕೂ ಕೃತಜ್ಞನಾಗಿದ್ದೇನೆ. ನನ್ನ ಮಾತು ಕೇಳಲು ಅವಕಾಶ ನೀಡಿದ ಕೋರ್ಟ್‌ಗೆ ಕೃತಜ್ಞಳಾಗಿದ್ದೇನೆ. ಗೌರವಾನ್ವಿತ ನ್ಯಾಯಾಲಯದ ಮುಂದೆ ನನ್ನ ಮನವಿ ಸಲ್ಲಿಸುತ್ತೇನೆ. ಸತ್ಯಮೇವ ಜಯತೇ. ಆತ್ಮೀಯ ಸ್ನೇಹಿತರೇ, ಹಿತೈಷಿಗಳೇ ನಿಮ್ಮಿಂದ ಅಪಾರ ಬೆಂಬಲ ಸಿಕ್ಕಿದೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರೋಹಿಣಿ ಸಿಂಧೂರಿ ವಿರುದ್ಧ ತಾನು ಕಾನೂನು ಹೋರಾಟಕ್ಕಿಳಿಯುವುದಾಗಿ ರೂಪಾ ಸೂಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ರೋಹಿಣಿ ಹಾಗೂ ರೂಪಾ ಪರ ವಕೀಲರ ನಡುವಿನ ವಾದ-ಪ್ರತಿವಾದ ನಡೆಯಲಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬ ಕುತೂಹಲವಿದೆ.