ಸತ್ಯ ಶೋಧನಾ ತಂಡಕ್ಕೆ ಸೇರಿದ ವಕೀಲರ ಮೇಲೆ ಪ್ರಕರಣ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪಿಯುಸಿಎಲ್

ನವದೆಹಲಿ: ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಮಾನವ ಹಕ್ಕು ತಂಡ ಶುಕ್ರವಾರ ದೆಹಲಿ ಮೂಲದ ನಾಲ್ವರು ವಕೀಲರನ್ನು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಮತ್ತು IPC ಯ ಸೆಕ್ಷನ್‌ಗಳ ಅಡಿಯಲ್ಲಿ ತ್ರಿಪುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೋಮುಗಲಭೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಮಾಹಿತಿ ಹಂಚಿಕೊಂಡಿದ್ದಾರೆಂದು ಆರೋಪಿಸಿ ವಕೀಲರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ತ್ರಿಪುರಾ ಪೊಲೀಸರ ಈ ಕ್ರಮವನ್ನು ಟೀಕಿಸಿರುವ ಪಿಯುಸಿಎಲ್ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕರ್ತರು ಮಸೀದಿ, ಕೆಲವು ಮನೆಗಳು ಮತ್ತು ಅಂಗಡಿಗಳನ್ನು ಹಾನಿಗೊಳಿಸಿರುವ ತ್ರಿಪುರಾದ ಪಾಣಿಸಾಗರ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಗ್ಗೆ ಸತ್ಯಾಧಾರಿತ ವರದಿ ಮಾಡಿರುವ ವಕೀಲ ಮುಖೇಶ್ ಅವರನ್ನು ಗುರಿಯಾಗಿಸಿ ಪೋಲೀಸ್ ಕ್ರಮ ಕೈಗೊಂಡಿದ್ದಾರೆಂದು ಪಿಯುಸಿಎಲ್ ಹೇಳಿದೆ.

ಮುಖೇಶ್‌ಗೆ ನೀಡಿದ ನೋಟಿಸ್‌ನಲ್ಲಿ ತ್ರಿಪುರಾ ಪೊಲೀಸರು ಹೀಗೆ ಹೇಳಿದ್ದಾರೆ: “ತನಿಖೆಯ ಸಮಯದಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಪಿತೂರಿ ಕಂಡುಬಂದಿದೆ. ಹಾಗಾಗಿ, ಪ್ರಕರಣಕ್ಕೆ ಸಂಬಂಧಿಸಿದ ವಾಸ್ತವಿಕ ಸಂದರ್ಭಗಳನ್ನು ಖಚಿತಪಡಿಸಿಕೊಳ್ಳಲು ಸಮಂಜಸವಾದ ಆಧಾರಗಳಿವೆ ಎಂದು ಆರೋಪಿಸಲಾಗಿದೆ.

“ಪೊಲೀಸರು ಯುಎಪಿಎ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತ್ರಿಪುರಾದ ಅನೇಕ ಪಟ್ಟಣಗಳಲ್ಲಿ ಮುಸ್ಲಿಮರ ಹಲವಾರು ಮನೆಗಳು, ಅಂಗಡಿಗಳು, ಮಸೀದಿಗಳು ಮತ್ತು ಇತರ ಆಸ್ತಿಗಳನ್ನು ನಾಶಪಡಿಸಿದ ದೊಡ್ಡ ಪ್ರಮಾಣದ ಹಿಂಸಾಚಾರವು ಹಿಂದೂ ಪರ ಸಂಘಟನೆಗಳು ನಡೆಸಿದ ಕೃತ್ಯಗಳಾಗಿವೆ. ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ತ್ರಿಪುರಾ ಪೊಲೀಸರು ಮೌನವಾಗಿದ್ದು ಪ್ರಜ್ಞಾಪೂರ್ವಕವಾಗಿ ತಮ್ಮ ಕರ್ತವ್ಯಗಳನ್ನು ಚ್ಯುತಿ ಮಾಡಿದ್ದಾರೆಂದು ಪಿಯುಸಿಎಲ್‌ನ ರಾಷ್ಟ್ರೀಯ ಅಧ್ಯಕ್ಷ ರವಿಕಿರಣ್ ಜೈ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ ವಿ ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾನವ ಹಕ್ಕುಗಳ ಸಂಘಟನೆಯು ಮುಸ್ಲಿಮರು ವಾಸಿಸುವ ಕಟ್ಟಡಗಳ ಮೇಲಿನ ದಾಳಿಗಳು ಮತ್ತು ತ್ರಿಪುರಾದಲ್ಲಿನ ಹಿಂಸಾಚಾರದ ತೀವ್ರತೆಯ ಕುರಿತು ‘ತ್ರಿಪುರಾದಲ್ಲಿ ಮಾನವೀಯತೆಯ ಮೇಲಿನ ದಾಳಿ’ ಎಂಬ ವರದಿಯನ್ನು ಸಿದ್ಧಪಡಿಸಿದೆ. ಈ ಸಂಬಂಧ ಲಾಯರ್ಸ್ ಫಾರ್ ಡೆಮಾಕ್ರಸಿ, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ಸ್ ಮತ್ತು ಪಿಯುಸಿಎಲ್ ನಂತಹ ಸಂಘಟನೆಗಳಿಗೆ ಸೇರಿದ ನಾಲ್ವರು ಸುಪ್ರೀಂ ಕೋರ್ಟ್ ವಕೀಲರಿಗೆ ನೋಟಿಸ್ ನೀಡಲಾಗಿದೆ.

ತ್ರಿಪುರಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀಕಾಂತ ಗುಹಾ ಅವರು ಗುರುವಾರ, “ಧಾರ್ಮಿಕ, ಬೆದರಿಕೆ, ಸಾರ್ವಜನಿಕ ಶಾಂತಿಯನ್ನು ಕದಡಲು ಪ್ರಚೋದನೆ ಮತ್ತು ಕ್ರಿಮಿನಲ್ ಪಿತೂರಿಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ಅಸಂಗತ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ಆರೋಪವನ್ನು ಹೊರಿಸಲಾಗಿದೆ” ಎಂದು ಹೇಳಲಾಗಿದೆ‌.

ಸಾಮಾಜಿಕ ಮಾಧ್ಯಮದಲ್ಲಿ ಕಪೋಲಕಲ್ಪಿತ ಮತ್ತು ಗೊಂದಲದ ವಿಷಯವನ್ನು ಪೋಸ್ಟ್‌ ಮಾಡಿದ ಆರೋಪದ ಮೇಲೆ ರಾಜ್ಯ ಪೊಲೀಸರು 71 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಒಟ್ಟು ಐದು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ.

ತ್ರಿಪುರಾದಲ್ಲಿ ಎಲ್ಲಿಯೂ ಕೋಮು ಉದ್ವಿಗ್ನತೆ ಇಲ್ಲ ಎಂದು ರಾಜ್ಯ ಪೊಲೀಸರು ಹೇಳಿಕೆಯನ್ನೂ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ತ್ರಿಪುರಾದಲ್ಲಿ “ಕೆಲವು ಕಿಡಿಗೇಡಿಗಳು ಹಿಂಸಾಚಾರ” ನಡೆಸಿದ್ದಾರೆ ಎಂದು ಡಿಐಜಿ (ದಕ್ಷಿಣ ವಲಯ) ಜಿ ಕೆ ರಾವ್ ಒಪ್ಪಿಕೊಂಡಿದ್ದಾರೆ.ಈ ಘಟನೆಗಳಲ್ಲಿ ಉಂಟಾದ ನಷ್ಟಗಳಿಗೆ ರಾಜ್ಯ ಸರ್ಕಾರ ಪರಿಹಾರವನ್ನು ಘೋಷಿಸಿದೆ ಎಂದು ಪದೇ ಪದೇ ಒತ್ತಿ ಹೇಳಿದ್ದಾರೆ.

ಪೊಲೀಸರು ನಿಷ್ಪಕ್ಷಪಾತವಾಗಿದ್ದು, ಕಳೆದ ವಾರದಲ್ಲಿ ಯಾವುದೇ ಹಿಂಸಾತ್ಮಕ ಘಟನೆಗಳು ನಡೆದಿಲ್ಲ ಎಂದು ಡಿಐಜಿ ಹೇಳಿದ್ದಾರೆ.ಪಿಯುಸಿಎಲ್ ಹೇಳಿಕೆ ಕುರಿತು ತ್ರಿಪುರಾ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನಾಲ್ಕು ವಾರಗಳಲ್ಲಿ ಪಾಣಿಸಾಗರ ಹಿಂಸಾಚಾರದ ಬಗ್ಗೆ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಕೇಳಿ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.

Latest Indian news

Popular Stories

error: Content is protected !!