ನವದೆಹಲಿ: ಚುನಾವಣೆಗಳನ್ನು ಶೀಘ್ರದಲ್ಲಿ ನಡೆಸಬೇಕೆಂದು ಆಗ್ರಹಿಸಿ ಪೆರು ದೇಶದ ಪುನೋದ ದಕ್ಷಿಣ ಪ್ರದೇಶದಲ್ಲಿ ಶುರುವಾದ ಘರ್ಷಣೆ ಹಿಂಸಾರೂಪಕ್ಕೆ ತಿರುಗಿದ್ದು ಪರಿಸ್ಥಿತಿ ನಿಯಂತ್ರಿಸಲು ಕರ್ಫ್ಯೂ ಜಾರಿ ಮಾಡಿ ಪ್ರಧಾನ ಮಂತ್ರಿ ಆಲ್ಬರ್ಟೊ ಒಟಾರೊಲಾ ಆದೇಶಿಸಿದ್ದಾರೆ.
ಶೀಘ್ರದಲ್ಲಿ ಚುನಾವಣೆ ನಡೆಸಬೇಕು ಹಾಗೂ ಜೈಲಿನಲ್ಲಿರುವ ಮಾಜಿ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಸಾವಿರಾರು ಮಂದಿ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದು, ಭದ್ರತಾ ಸಿಬ್ಬಂದಿಗಳೊಂದಿಗೆ ಘರ್ಷಣೆ ಉಂಟಾಗಿ, ಪ್ರತಿಭಟನೆ ಹಿಂಸಾತ್ಮಕ ಹಾದಿಗೆ ತಿರುಗಿದೆ.
ದಕ್ಷಿಣ ಪೆರುವಿನ ಪುನೊ ಪ್ರದೇಶದ ಟಿಟಿಕಾಕಾ ಸರೋವರದ ದಡದ ಸಮೀಪವಿರುವ ಜೂಲಿಯಾಕಾ ಎಂಬ ನಗರದಲ್ಲಿ ಈ ಘರ್ಷಣೆಗಳು ಸಂಭವಿಸಿದ್ದು, ಇದರಲ್ಲಿ 68 ಜನರು ಗಾಯಗೊಂಡಿದ್ದಾರೆ. ಕನಿಷ್ಠ 17ಮಂದಿ ಮೃತ ಪಟ್ಟಿದ್ದಾರೆ ಎಂದು ಪುನೋ ಆರೋಗ್ಯ ಸಚಿವಾಲಯದ ಅಧಿಕಾರಿ ಹೆನ್ರಿ ರೆಬಾಜಾ ಮಾಧ್ಯಮಗಳಿಗೆ ಹೇಳಿದ್ದಾರೆ.
ಡಿಸೆಂಬರ್ ನಲ್ಲಿ ಪೆಡ್ರೊ ಕ್ಯಾಸ್ಟಿಲ್ಲೊ ಕಾನೂನುಬಾಹಿರವಾಗಿ ಸಂಸತ್ತನ್ನು ವಿಸರ್ಜಿಸಲು ಪ್ರಯತ್ನಿಸಿದ ಸ್ವಲ್ಪ ಸಮಯದ ನಂತರ ಕ್ಯಾಸ್ಟಿಲ್ಲೊರನ್ನು ಅಧಿಕಾರದಿಂದ ಕೆಳಗಿಳಿಸಿ ಅವರನ್ನು ಬಂಧಿಸಿದ್ದರು. ಇದಲ್ಲದೆ ಹಲವು ಭ್ರಷ್ಟಚಾರದ ಆರೋಪಗಳು ಪೆಡ್ರೊ ಕ್ಯಾಸ್ಟಿಲ್ಲೊ ಅವರ ಮೇಲೆ ಕೇಳಿ ಬಂದಿತ್ತು.