ಸಾಹಿತಿ ನಾ ಡಿಸೋಜ ಅವರ ಸಾಹಿತ್ಯ ಜೈಮಿನ ಭಾರತದ ಅಶ್ವಮೇಧ ಯಜ್ಞದ ಕುದುರೆಯಂತೆ: ಡಾ. ಮುಸ್ತಾಫ. ಕೆ ಎಚ್

WhatsApp Image 2023 10 01 at 3.46.13 PM Featured Story, Kodagu, State News
ಕೊಡಗು: ಸಾಹಿತಿ ನಾ ಡಿಸೋಜ ಅವರ ಸಾಹಿತ್ಯ ಜೈಮಿನ ಭಾರತದ ಅಶ್ವಮೇಧ ಯಜ್ಞದ ಕುದುರೆಯಂತೆ. ಕುದುರೆ ಚಲಿಸಿದಂತೆ ಕಥೆಗಳು ನಿಲ್ಲುತ್ತದೆ. ಕುದುರೆ ನಿಂತರೆ ಕಥೆಗಳು ಚಲಿಸಲಾರಂಭಿಸುತ್ತದೆ‌. ಅದೇ ರೀತಿಯಲ್ಲಿ ನಾ. ಡಿಸೋಜ ಅವರ ಕಾದಂಬರಿಗಳಲ್ಲಿ ಅಣೆಕಟ್ಟು, ಒಡ್ಡುಗಳ ಕಾರಣದಿಂದ ನೀರು ನಿಂತರೆ ಒಂದೊಂದು ಕಥೆಗಳು ಹುಟ್ಟಿಕೊಳ್ಳುತ್ತವೆ ಎಂದು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರಾದ ಡಾ. ಮುಸ್ತಾಫ. ಕೆ ಎಚ್ ಅವರು ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ನಾ.ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಉಪನ್ಯಾಸ ಮತ್ತು ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ನಾ ಡಿಸೋಜ ಅವರ ಸಾಹಿತ್ಯದ ಕುರಿತು ದತ್ತಿ ಉಪನ್ಯಾಸ ನೀಡಿದ ಅವರು ನಾ. ಡಿಸೋಜ ಅವರ ಸಾಹಿತ್ಯದಲ್ಲಿ ಕಾಣುವ ದಟ್ಟ ಜೀವನಾನುಭವ, ಪ್ರಕೃತಿಯ ನಿರೂಪಣೆಗೆ ಅವರ ಬಾಲ್ಯಕಾಲದ ಪರಿಸರ ಹೇಗೆ ಕಾರಣವಾಯಿತು ಎಂಬುದನ್ನು ಚರ್ಚಿಸಿದರು. ನಾ.ಡಿಸೋಜ ಅವರ ಕಥನ ಮಾದರಿಗಳಲ್ಲಿ ಕಾಣುವ ಸಮುದಾಯ ವಿಮರ್ಶೆಯ ಮಾದರಿಗಳನ್ನು ಸುಣ್ಣಬಳಿದ ಸಮಾಧಿಗಳು, ನೆಲೆ, ಬಣ್ಣ ಮುಂತಾದ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಚರ್ಚಿಸಿದರು. ಉತ್ತರ ಕನ್ನಡ ಮತ್ತು ಶಿವಮೊಗ್ಗ ಪ್ರದೇಶಗಳಲ್ಲಿ ನಡೆದ ರೈತಚಳವಳಿ, ಸಮಾಜವಾದಿ ತಾತ್ವಿಕತೆಯ ನವಿರನ್ನು ಅವರ ಶಾಂತವೇರಿ ಗೋಪಾಲಗೌಡ, ಕೊಳಗ, ತಿರುಗೋಡಿನ ರೈತ ಮಕ್ಕಳು, ಮಂಜಿನಕಾನು ಕೃತಿಗಳ ಮೂಲಕ ವಿಶ್ಲೇಷಣೆಗೆ ಒಳಪಡಿಸಿದರು. ಎಡ ಬಲವೆಂಬ ಸೈದ್ಧಾಂತಿಕ ನಿರೂಪಣೆಗಳನ್ನು ಬದಿಗೊತ್ತಿ ಸಮನ್ವಯತೆಯ ಹಾದಿಯನ್ನು ನಾ. ಡಿಸೋಜ ಅವರು ತಮ್ಮ ಬದುಕು ಮತ್ತು ಬರೆಹದಲ್ಲಿ ಸಾಧಿಸಿ ತೋರಿಸಿದರು. ಅವರ ಸಾಹಿತ್ಯ ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಯ ಆಕರಗಳೆಂದು ಅವರನ್ನು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓದಬೇಕು ಎಂದು ಡಾ. ಮುಸ್ತಾಫ. ಕೆ ಎಚ್ ಅವರು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರೊ. ಕೃಷ್ಣ ಎಂ ಪಿ ಅವರು ಡಾ. ನಾ. ಡಿಸೋಜ ಅವರ ಸಾಹಿತ್ಯ ಸೃಷ್ಟಿಯ ಪರಿಚಯಾತ್ಮಕ ನೆಲೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್ ಐ ಮುನೀರ್ ಅಹ್ಮದ್ ವಹಿಸಿಕೊಂಡು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಯಲ್ಲಿ ಭಾಗವಹಿಸಬೇಕು. ನಾ. ಡಿಸೋಜ ಅವರ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ಹೆಚ್ಚು ಹೆಚ್ಚು ಓದಬೇಕು. ಆ ಮೂಲಕ ಜೀವಪರವಾದ ನಿಲುವುಗಳನ್ನು ಪ್ರತಿಪಾದಿಸುವ ಉತ್ತಮ ಪ್ರಜೆಗಳಾಗಬೇಕು. ಸಾಹಿತ್ಯ, ಸಂಸ್ಕೃತಿಗಳು ಬದುಕಿನ ರಹದಾರಿ ರೂಪಿಸುವ ಮಹತ್ತರವಾದ ಕಾರ್ಯವನ್ನು ಮಾಡುತ್ತದೆ‌. ಆದ್ದರಿಂದ ಸಾಹಿತ್ಯಕ ಒಲವನ್ನು ನಮ್ಮಲ್ಲಿ ವೃದ್ಧಿಸಿಕೊಳ್ಳದೆ ಮನುಷ್ಯಪರವಾಗಿ, ಜೀವಪರವಾಗಿರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೊಡಗಿನ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆಸಿದ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು‌. ಬಹುಮಾನಿತರ ಪಟ್ಟಿಯನ್ನು ಓದಿ ವಿದ್ಯಾರ್ಥಿಗಳು ಸಾಹಿತ್ಯ ಸೃಷ್ಟಿಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ರೇವತಿ ರಮೇಶ್ ಕಿವಿಮಾತನ್ನಿತ್ತರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿಗಳಾದ ಶ್ರೀ ಎಸ್ ಎಸ್ ಸಂಪತ್ ಕುಮಾರ್ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಕಡ್ಲೇರ ತುಳಸಿ ಮೋಹನ್ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮವನ್ನು ದ್ವಿತೀಯ ಕನ್ಬಡ ಐಚ್ಛಿಕ ವಿದ್ಯಾರ್ಥಿಗಳಾದ ಕುಮಾರಿ ತೇಜ ಮತ್ತು ಕುಮಾರಿ ಅಶ್ಮಿತ ನಿರೂಪಿಸಿದರು. ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರಾದ ಡಾ. ಕರುಣಾಕರ ಎನ್ ವಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ಮುಖೇಶ್, ಶ್ರೀ ರಾಜೀವ್ ಅವರು ಉಪಸ್ಥಿತರಿದ್ದರು. ಎನ್ ಎಸ್ ಎಸ್, ಎನ್ ಸಿ ಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Latest Indian news

Popular Stories