ಸಿಎಂ ಏಕನಾಥ್ ಶಿಂಧೆ ಸೇರಿ ಬಂಡಾಯ ಶಾಸಕರ ಅನರ್ಹಗೊಳಿಸುವಂತೆ ಕೋರಿ ಅರ್ಜಿ: ಜುಲೈ 11ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಬಣದ 15 ಶಿವಸೇನೆ ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಅರ್ಜಿ ವಿಚಾರಣೆ ಬಾಕಿ ಉಳಿದಿದ್ದು, ಅದನ್ನು ಜುಲೈ 11ರಂದು ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣದ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸುವಂತೆ ಕೋರಿ ಶಿವಸೇನೆ ಮುಖ್ಯಸ್ಥ ಸುನಿಲ್ ಪ್ರಭು ಅವರು ಸಲ್ಲಿಸಿರುವ ಅರ್ಜಿಯನ್ನು ಜುಲೈ 11ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. 

ಮುಖ್ಯಮಂತ್ರಿ ಸೇರಿದಂತೆ 16 ಶಾಸಕರ ವಿರುದ್ಧ ಅನರ್ಹತೆ ಪ್ರಕ್ರಿಯೆಗಳು ಬಾಕಿ ಇರುವ ಕಾರಣ ಅರ್ಜಿಯನ್ನು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರನ್ನು ಒಳಗೊಂಡ ರಜಾಕಾಲದ ಪೀಠವನ್ನು ಒತ್ತಾಯಿಸಿದರು. ಜುಲೈ 11 ರಂದು ಹೊಸ ಅರ್ಜಿಯನ್ನು ಆಲಿಸಲು ಪೀಠವು ಒಪ್ಪಿಕೊಂಡಿತು.

ಕಳೆದ ಜೂನ್ 29 ರಂದು, ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯನ್ನು ನಡೆಸುವಂತೆ 31 ತಿಂಗಳ ಮಹಾ ವಿಕಾಸ್ ಅಘಾಡಿ (MVA) ಸರ್ಕಾರಕ್ಕೆ ಮಹಾರಾಷ್ಟ್ರ ರಾಜ್ಯಪಾಲರು ನಿರ್ದೇಶನ ನೀಡಿದ್ದರು. ಅದಕ್ಕೆ ತಡೆನೀಡಬೇಕೆಂದು ಶಿವಸೇನೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ರಾಜ್ಯಪಾಲರ ನಿರ್ದೇಶನಕ್ಕೆ ತಡೆನೀಡಲು ನಿರಾಕರಿಸಿತ್ತು.

ಇದಾದ ಬಳಿಕ ಜೂನ್ 29ರಂದು ಸಂಜೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Latest Indian news

Popular Stories