ಸಿದ್ದಗಂಗಾ ಮಠದಲ್ಲಿ ‘ಬೂಟು’ ತೆಗೆಯದ ಕೇಂದ್ರ ಗೃಹ ಸಚಿವರ ಕ್ರಮ ಸ್ವೀಕಾರಾರ್ಹವಲ್ಲ- ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ ಸಿದ್ಧತಾ ಕಾರ್ಯಗಳು ಈಗಾಗಲೇ ಆರಂಭವಾಗಿವೆ. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸ ಇದಕ್ಕೆ ಪುಷ್ಟಿ ನೀಡುವಂತಿತ್ತು.

ಉಭಯ ನಾಯಕರು ಸರಣಿ ಕಾರ್ಯಕ್ರಮಗಳು, ಸಭೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಚುನಾವಣೆಗೆ ತಯಾರಿ ನಡೆಸುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು. ಲಿಂಗೈಕ್ಯ ಡಾ. ಶಿವಕುಮಾರ್ ಸ್ವಾಮೀಜಿಯ 115ನೇ ಜಯಂತೋತ್ಸವ ಅಂಗವಾಗಿ ತುಮಕೂರಿನ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠಕ್ಕೆ ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಭೇಟಿ ನೀಡಿ, ಸ್ವಾಮೀಜಿಯ ಗದ್ದುಗೆ ದರ್ಶನ ಪಡೆದರು.

ಈ ಭೇಟಿ ವೇಳೆ ಕೇಂದ್ರ ಗೃಹ ಅಮಿತ್ ಶಾ, ಕಾಲಿಗೆ ಧರಿಸಿದ ಬೂಟು ತೆಗೆಯದೆ ಅಗೌರವ ತೋರಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಫೋಟೋಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಬಸವಣ್ಣನೆಂದರೆ ವಿನಯವಂತಿಕೆ, ಬಸವಣ್ಣನೆಂದರೆ ಸರಳತೆ, ಬಸವಣ್ಣನಂದರೆ ಗೌರವ! ಗೃಹ ಸಚಿವರು ಸಿದ್ದಗಂಗಾ ಮಠದ ವೇದಿಕೆಯಲ್ಲಿ ಪಾದರಕ್ಷೆ ಧರಿಸಿ ಸ್ವಾಮೀಜಿಯತ್ತ ಪಾದಗಳನ್ನು ತೋರಿಸುತ್ತಿರುವುದು ಎಂತಹ ಉದಾಹರಣೆ ಎಂದಿದೆ.

ಸಂಸ್ಕೃತಿ ಮತ್ತು ಮಠಗಳನ್ನು ಗೌರವಿಸುವುದೆಂದರೆ ಬೂಟುಗಳನ್ನು ತೆಗೆಯುವುದು ಮತ್ತು ನಿಮ್ಮ ಕಾಲಗಳನ್ನು ಸ್ವಾಮೀಜಿ ಕಡೆಗೆ ತೋರಿಸದಿರುವುದು. ನೀವು ಹೊಂದಿರುವ ಸ್ಥಾನ ಅಪ್ರಸ್ತುತ. ಬಸವಣ್ಣ ಅವರ ಮನೆಯಲ್ಲಿ ಎಲ್ಲರೂ ಸಮಾನರು. ಸಿದ್ದಗಂಗಾ ಮಠದಲ್ಲಿ ಗೃಹ ಸಚಿವರ ಈ ಕ್ರಮ ಸ್ವೀಕಾರಾರ್ಹವಲ್ಲ. ನಕಲಿ ಮತ್ತು ಅಸಲಿ ನಂಬಿಕೆಯುಳ್ಳವರ ನಡುವಿನ ವ್ಯತ್ಯಾಸವಿದು ಎಂದು ಕಾಂಗ್ರೆಸ್ ಟೀಕಿಸಿದೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!