ನವದೆಹಲಿ: “ಸಿನಿಮಾಗಳ ಬಗ್ಗೆ ವಿನಾಕಾರಣ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಬೇಡಿ’- ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ನಾಯಕರಿಗೆ ಸ್ಪಷ್ಟ ಮಾತುಗಳಲ್ಲಿ ಆದೇಶ ನೀಡಿದ್ದಾರೆ.
ಮಂಗಳವಾರ ಮುಕ್ತಾಯವಾದ ಬಿಜೆಪಿ ಕಾರ್ಯಕಾರಿಣಿಯ ಸಮಾರೋಪ ಭಾಷಣದಲ್ಲಿ ಪ್ರಧಾನಿ ಈ ಮಾತುಗಳನ್ನು ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. “ಸಿನಿಮಾಗಳ ವಿರುದ್ಧ ವಿನಾಕಾರಣ ಹೇಳಿಕೆ ನೀಡುವುದರಿಂದ ನಾವು ಮಾಡಿರುವ ಹಲವು ಒಳ್ಳೆಯ ಕೆಲಸಗಳು ಮತ್ತು ಸಾಧನೆಗಳು ಕಡೆಗಣಿಸಲ್ಪಡುತ್ತವೆ. ಜತೆಗೆ ವಿವಾದಿತ ಹೇಳಿಕೆಗಳಿಂದ ಅವುಗಳು ಸುದ್ದಿಯಲ್ಲಿ ಇರುತ್ತವೆ. ಮಾತ್ರವಲ್ಲದೆ ಅದನ್ನು ಭಿನ್ನ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತದೆ. ಹೀಗಾಗಿ, ಅದರಿಂದ ದೂರ ಇರಬೇಕು’ ಎಂದು ಹೇಳಿದ್ದಾರೆ.
ಪ್ರಧಾನಿಯವರು ತಮ್ಮ ಭಾಷಣದಲ್ಲಿ ಯಾವುದೇ ಸಿನಿಮಾ ಹೆಸರು ಉಲ್ಲೇಖೀಸದಿದ್ದರೂ, ಪಠಾಣ್ ಸಿನಿಮಾ ವಿರುದ್ಧ ಕಟುವಾಗಿ ಟೀಕಿಸಿದ್ದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಅವರ ಮಾತುಗಳಿಗೆ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಿಶ್ರಾ “ಪ್ರಧಾನಿ ಮೋದಿಯವರ ಮಾತುಗಳು ನಮಗೆಲ್ಲರಿಗೂ ಅನುಸರಣೀಯ’ ಎಂದಿದ್ದಾರೆ. ಕಾರ್ಯಕಾರಿಣಿಯಲ್ಲಿ ಸಚಿವರ ಹೆಸರನ್ನು ಉಲ್ಲೇಖೀಸಿದ್ದಾರೆಯೇ ಎಂಬ ಪ್ರಶ್ನೆಗೆ ಅವರು, “ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ’ ಎಂದಿದ್ದಾರೆ.