ಹಾವೇರಿ: ದೇಶದಲ್ಲಿ ನಿತ್ಯ ಬಳಕೆಯ ಅಡುಗೆ ಸಿಲಿಂಡರ್ ಬೆಲೆ ಏರುಮುಖವಾಗಿ ಸಾಗುತ್ತಿದೆ. ಈ ಬಗ್ಗೆ ಜನರು ಸ್ವರ ಎತ್ತಲು ಆರಂಭಿಸಿದ್ದಾರೆ.
ಹಾವೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದ (Haveri BJP ST Convention) ವೇದಿಕೆ ಮುಂದೆಯೇ ಮಹಿಳೆ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಭಾಷಣ ಮಾಡುತ್ತಿದ್ದಾಗ, ವೇದಿಕೆ ಮುಂದೆ ಕುಳಿತಿದ್ದ ಬನ್ನಿಹಟ್ಟಿ ಗ್ರಾಮದ ಬಸಮ್ಮ ಕಮ್ಮಾರ್, ಸಿಲಿಂಡರ್ ದರ 1,300 ರೂ. ಮಾಡಿದ್ದೀರಿ, ಬಡವರು ಎಲ್ಲಿ ಹೋಗಬೇಕು? ಹಂತಹಂತವಾಗಿ ಏರಿಸುವ ಬದಲು ಒಂದೇ ಬಾರಿಗೆ 1500 ರೂ. ಮಾಡಿಬಿಡಿ ಸರಿಯಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಬಳಿ ದುಡ್ಡಿದೆ ನಿಮ್ಮನೆ ಹೆಣ್ಣುಮಕ್ಕಳು ಅಡುಗೆ ಮಾಡಿ ಹಾಕುತ್ತಾರೆ. ನಾವು ಬಡವರು ಎಲ್ಲಿಂದ ಹಣ ತರುವುದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಇತರೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಬಸಮ್ಮರನ್ನು ಸಮಾಧಾನ ಪಡಿಸಿದರು.