ವಿಜಯಪುರ : ನಾನು ಹಿಂದು, ನಮ್ಮಪ್ಪ-ಅವ್ವನೂ ಹಿಂದೂ, ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಸಿ.ಟಿ.ರವಿ ಹೇಳಿಕೆಗೆ ಟಾಂಗ್ ನೀಡಿದರು.
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿಂದು ಅಲ್ಲವಾ, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ಎಂದು ಪ್ರಶ್ನಿಸಿದರು. ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದರು.
ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು ಅವೆಲ್ಲವನ್ನು ಮುಸ್ಲಿಂರಿಗೆ ಕೊಟ್ಟಿದ್ದೆವಾ? 15 ಲಕ್ಷ ಮನೆಗಳಲ್ಲಿ ಕೇವಲ 5 ರಷ್ಟು ಮುಸ್ಲಿಂರಿಗೆ ಕೊಟ್ಟಿದ್ದೇವೆ, ಶೇ. 95 ರಷ್ಟು ಹಿಂದುಗಳಿಗೆ ಕೊಡಲಾಗಿತ್ತು ಎಂದರು.
ಬಿಜೆಪಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಲಾವಣೆ ಮಾಡಲು ಆಗಿಲ್ಲ, ರೈತರ ಬಿಕ್ಕಟ್ಟಿಗೆ ಪರಿಹಾರ ಒದಗಿಸಲಾಗಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ 2017ರಲ್ಲಿ ಹೇಳಿದ್ದರು ಆದರೆ, ರೈತರ ಸಾಲ ದುಪ್ಪಟ್ಟಾಯಿತೇ ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಆರೋಪಗಳೆಲ್ಲ ಸುಳ್ಳು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಈಗ ಏಳು ಕೆಜಿ ಇದ್ದ ಅಕ್ಕಿ 5 ಕೆಜಿಗೆ ಇಳಿಸಿದ್ದು ಸುಳ್ಳಾ? ಅಕ್ಕಿ ಕೇಂದ್ರ ಸರ್ಕಾರದ್ದು, ಚೀಲ ಮಾತ್ರ ಕಾಂಗ್ರೆಸ್‌ನದ್ದು ಎನ್ನುವ ಬಿಜೆಪಿಗರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ, ಅಸ್ಸಾಂನಲ್ಲಿ ಏಕೆ ಕೊಡುತ್ತಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ ಅದನ್ನು ಮಾಡುತ್ತೇವೆ ಎಂದರು.
ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರ ಮೇಲೆ ರೌಡಿ ಶೀಟರ್ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ರೌಡಿ ಶೀಟರ್ ಪ್ರಕರಣ ದಾಖಲಿಸಬಾರದು. ನೆಲ, ಜಲ, ಭಾಷೆಯ ಉಳಿಯುವ ಎಲ್ಲರ ಮೂಲಭೂತ ಹಕ್ಕು. ರಾಜ್ಯಗಳ ಸ್ವಾಯತ್ತ ಹಕ್ಕು ಯಾರೂ ಕಸಿದುಕೊಳ್ಳುವಂತಿಲ್ಲ ಎಂದರು.
ಮಹಾಜನ ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಲಾಗಿದೆ ಆದರೂ ಮಹಾರಾಷ್ಟ್ರ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದು ಸರಿಯಲ್ಲ ಎಂದರು.