ಸುಡಾನ್ ಸೇನಾ ಸಂಘರ್ಷ: ಕನಿಷ್ಠ 180 ಸಾವು, 1,800ಕ್ಕೂ ಹೆಚ್ಚು ಜನರಿಗೆ ಗಾಯ, ಭಾರತೀಯರಿಗೆ ಸಹಾಯವಾಣಿ

ಖಾರ್ಟೂಮ್(ಸೂಡಾನ್): ಸೂಡಾನ್ ನ ಮಿಲಿಟರಿ ಮತ್ತು ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ನಡುವೆ ಉಂಟಾದ ಸಂಘರ್ಷದಲ್ಲಿ ಇದುವರೆಗೆ ಕನಿಷ್ಠ 180 ಮಂದಿ ಮೃತಪಟ್ಟಿದ್ದು 1,800ಕ್ಕೂ ಹೆಚ್ಚು ಮಂದಿ ನಾಗರಿಕರು ಮತ್ತು ಹೋರಾಟಗಾರರು ಗಾಯಗೊಂಡಿದ್ದಾರೆ ಎಂದು ಸೂಡಾನ್ ನ ವಿಶ್ವಸಂಸ್ಥೆ ರಾಯಭಾರಿ ವೊಲ್ಕರ್ ಪರ್ತ್ಸ್ ತಿಳಿಸಿದ್ದಾರೆ.

ನ್ಯಾಯಾರ್ಕ್ ಟೈಮ್ಸ್ ವರದಿ ಪ್ರಕಾರ, ಸಂಘರ್ಷದಿಂದಾಗಿ ರಾಜಧಾನಿ ಖಾರ್ಟೂಮ್ ನಲ್ಲಿ 5 ಮಿಲಿಯನ್ ಗಿಂತಲೂ ಅಧಿಕ ಮಂದಿ ಮನಂಯಿಂದ ಹೊರಗೆ ಬರಲಾಗದೆ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ, ಇದು ಮುಸಲ್ಮಾನರ ಪವಿತ್ರ ತಿಂಗಳು ರಂಜಾನ್ ಆಗಿದ್ದರೂ ಕಳೆದ ಕೆಲವು ದಿನಗಳಿಂದ ಇಲ್ಲಿನ ನಿವಾಸಿಗಳಿಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಇಲ್ಲದೆ ದಿನನಿತ್ಯದ ಕೆಲಸಗಳಿಗೆ ಜನರಿಗೆ ಕಷ್ಟವಾಗುತ್ತಿದೆ. 

ಜನರಿಗೆ ತುರ್ತು ಆರೋಗ್ಯ ಸೌಲಭ್ಯ ಕೂಡ ದೊರಕುತ್ತಿಲ್ಲ. ಖಾರ್ಟೂಮ್‌ನ ಈಶಾನ್ಯ ಭಾಗದಲ್ಲಿ ಪ್ರಮುಖ ವೈದ್ಯಕೀಯ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆ, ತುರ್ತು ಔಷಧಿಗಳು ಕೂಡ ನಾಗರಿಕರಿಗೆ ಸಿಗದ ಪರಿಸ್ಥಿತಿ ಉಂಟಾಗಿದೆ. ಈ ಭಾಗದಲ್ಲಿ 12ಕ್ಕೂ ಹೆಚ್ಚು ಆಸ್ಪತ್ರೆಗಳು ಮುಚ್ಚಿವೆ. 

ನಿನ್ನೆ ಅಪರಾಹ್ನ ಸೂಡಾನ್ ಗೆ ಐರೋಪ್ಯ ಒಕ್ಕೂಟದ ರಾಯಭಾರಿ ಏಡನ್ ಒ’ಹರಾ ಮೇಲೆ ಹಲ್ಲೆ ನಡೆದಿದೆ. ಅವರ ಮೇಲೆ ಯಾರು ಹಲ್ಲೆ ನಡೆಸಿದ್ದಾರೆ ಎಂದು ತಕ್ಷಣಕ್ಕೆ ಗೊತ್ತಾಗಿಲ್ಲ, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಸೂಡಾನ್ ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಮಧ್ಯೆ ಕಳೆದ ಶನಿವಾರ ಘರ್ಷಣೆ ಆರಂಭವಾಗಿದ್ದು ರ್ಯಾಪಿಡ್ ಸಪೋರ್ಟ್ ಫೋರ್ಸ್ ಎಂಬ ಪ್ಯಾರಾಮಿಲಿಟರಿ ಗುಂಪು ಸೂಡಾನ್ ಸೇನೆಯ ವಿರುದ್ಧ ಯುದ್ಧ ಸಾರಿತು. ಸೂಡಾನ್ ನ ಇಬ್ಬರು ಉನ್ನತ ಮಟ್ಟದ ಕಮಾಂಡರ್ ಗಳು ಸೇನೆಯ ಅಧಿಪತ್ಯ ಹೊಂದುವ ವಿಷಯದಲ್ಲಿ ಹಲವು ವರ್ಷಗಳಿಂದ ವೈಮನಸ್ಸು ಇದ್ದು ಅದೀಗ ತಾರಕಕ್ಕೇರಿದೆ.

ಅಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿರುವ ಭಾರತದ ವಿದೇಶಾಂಗ ಸಚಿವಾಲಯ ಅಲ್ಲಿನ ಭಾರತೀಯರ ರಕ್ಷಣೆ ಮತ್ತು ಸಹಾಯಕ್ಕಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಅಲ್ಲದೆ ನಿಯಂತ್ರಣ ಕೊಠಡಿ ಸಂಖ್ಯೆಯ ದೂರವಾಣಿ ಸಂಖ್ಯೆ ಇಮೇಲ್ ವಿಳಾಸಗಳನ್ನು ಸಹ ಜನತೆಗೆ ನೀಡಲಾಗಿದೆ. ಅದು ಹೀಗಿದೆ.

ದೂರವಾಣಿ ಸಂಖ್ಯೆಗಳು: 1800 11 8797 (ಟೋಲ್ ಫ್ರೀ) +91-11-23012113; +91-11-23014104; +91-11-23017905; ಮೊಬೈಲ್: +91 99682 91988 ಮತ್ತು ಇಮೇಲ್: [email protected] 

Latest Indian news

Popular Stories