ಸುರತ್ಕಲ್ ಟೋಲ್’ಗೇಟ್’ನ 200 ಮೀಟರ್ ಸುತ್ತ 144 ಸೆಕ್ಷನ್

ಮಂಗಳೂರು ಅಕ್ಟೋಬರ್ 27: ಟೋಲ್ ಗೇಟ್ ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 28 ರಂದು ಬೆಳಿಗ್ಗೆ 6 ರಿಂದ ನವೆಂಬರ್ 3 ರ ಸಂಜೆ 6 ರವರೆಗೆ ಎನ್‌ಐಟಿಕೆ ಟೋಲ್ ಪ್ಲಾಜಾ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯವರೆಗೆ ಕಲಂ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಆದೇಶಿಸಿದ್ದಾರೆ.

ಸೆಕ್ಷನ್ 144 ಜಾರಿಯಲ್ಲಿರುವಾಗ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಪಟಾಕಿ ಸಿಡಿಸುವುದು, ಕಲ್ಲು ತೂರಾಟ, ಶಸ್ತ್ರಾಸ್ತ್ರ, ಬಂದೂಕು, ಅಧಿಕಾರಿಗಳ ವಿರುದ್ಧ ಸ್ಫೋಟಕ, ಘೋಷಣೆ, ಮೆರವಣಿಗೆ, ಪ್ರತಿಭಟನೆ, ರಸ್ತೆ ತಡೆ ಹೀಗೆ ಇತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಸುರತ್ಕಲ್ ಟೋಲ್ ಗೇಟ್ ಪ್ರತಿಭಟನಾಕಾರರಿಗೆ ಪ್ರತಿಭಟನೆ ಕೈಬಿಡುವಂತೆ ಡಿಸಿ ಸೂಚನೆ

ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸಲು ಸರ್ಕಾರ ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸುವವರೆಗೆ ಅಕ್ಟೋಬರ್ 28 ರಂದು ಹಮ್ಮಿಕೊಂಡಿರುವ ಹೋರಾಟವನ್ನು ಕೈಬಿಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಟೋಲ್ ಗೇಟ್ ಹೋರಾಟ ಸಮಿತಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಕುಮಾರ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 27ರ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.

“ಸರಕಾರವು ಗೆಜೆಟ್ ಅಧಿಸೂಚನೆಯನ್ನು ರವಾನಿಸುವವರೆಗೆ ಟೋಲ್ ಗೇಟ್ ಹೋರಾಟ ಸಮಿತಿಯು ಸಾಕಷ್ಟು ತಾಳ್ಮೆಯಿಂದಿರಬೇಕು. ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸುರತ್ಕಲ್ ಟೋಲ್ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಗೇಟ್ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಬಾರದು ಅಥವಾ ಅಹಿತಕರ ಕ್ರಮಗಳನ್ನು ಕೈಗೊಳ್ಳಬಾರದು,’’ ಎಂದರು.

ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ಮಾತನಾಡಿ, ಸುರತ್ಕಲ್ ಟೋಲ್ ಗೇಟ್ ತೆಗೆಯುವಂತೆ ಸಚಿವ ನಿತಿನ್ ಗಡ್ಕರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗೆಜೆಟ್ ಅಧಿಸೂಚನೆ ಬಾಕಿ ಇದೆ. ಅಧಿಸೂಚನೆ ಯಾವಾಗ ಜಾರಿಗೆ ಬರಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿಯು ಅಕ್ಟೋಬರ್ 28 ರಂದು ನಿಗದಿಯಾಗಿರುವ ಸುರತ್ಕಲ್ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹದ ವಿರುದ್ಧ ಯಾವುದೇ ಪ್ರತಿಭಟನೆ ನಡೆಸದಂತೆ ನಾವು ಒತ್ತಾಯಿಸುತ್ತೇವೆ.

ಮುನೀರ್ ಕಾಟಿಪಳ್ಳ ಈ ಕುರಿತು ಮಾತನಾಡಿ, “ಟೋಲ್ ಗೇಟ್ ತೆಗೆಯುವ ಬಗ್ಗೆ ಅವರು ನಮಗೆ ಭರವಸೆ ನೀಡಿದ್ದು ಇದೇ ಮೊದಲಲ್ಲ. ಸುರತ್ಕಲ್ ಟೋಲ್ ಗೇಟ್ ತೆಗೆಯುವ ಕ್ರಮಕ್ಕೆ ಸಂಬಂಧಿಸಿದಂತೆ ನಮಗೆ ನೀಡಿದ ಯಾವುದೇ ರೀತಿಯ ಭರವಸೆಯನ್ನು ನಾವು ನಂಬುವ ಹಂತದಲ್ಲಿಲ್ಲ. ಟೋಲ್ ಸಂಗ್ರಹವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಅಥವಾ ಸರ್ಕಾರದಿಂದ ಅಧಿಕೃತ ಗೆಜೆಟ್ ಅಧಿಸೂಚನೆ ಬರುವವರೆಗೆ ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಶಾಂತಿಯುತ ರ್ಯಾಲಿ ನಡೆಸಲು ಪೊಲೀಸರಿಂದ ಅನುಮತಿ ಪಡೆದಿದ್ದೇವೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಅಂಶುಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಟೋಲ್ ಗೇಟ್ ಹೋರಾಟ ಸಮಿತಿಯ ಕಾನೂನು ಸಲಹೆಗಾರ ದಿನೇಶ್ ಹೆಗ್ಡೆ ಉಳ್ಳೆಪಾಡಿ, ಇಮ್ತಿಯಾಝ್, ಅಜೀಜ್ ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories