ಸೂರ್ಯ ನಮಸ್ಕಾರದ ಆದೇಶ ಅಸಾಂವಿಧಾನಿಕ, ಹುಸಿ ದೇಶ ಭಕ್ತಿ – ಖಾಲಿದ್ ಸೈಫುಲ್ಲಾ ರೆಹಮಾನಿ

ಹೊಸದಿಲ್ಲಿ: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ‘ಆಜಾದಿ ಕಾ ಅಮೃತ್‌ ಮಹೋತ್ಸವ್‌’ ಕಾರ್ಯಕ್ರಮದ ಭಾಗವಾಗಿ ಶಾಲೆಗಳಲ್ಲಿ ಆಯೋಜಿಸುತ್ತಿರುವ ‘ಸೂರ್ಯ ನಮಸ್ಕಾರ’ಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ವಿರೋಧ ವ್ಯಕ್ತಪಡಿಸಿದೆ.

‘ಸ್ವಾತಂತ್ರ್ಯ ದಿನಾಚರಣೆ ಹೆಸರಿನಲ್ಲಿ 30 ಸಾವಿರ ಶಾಲೆಗಳಲ್ಲಿ ಜನವರಿ 1ರಿಂದ ಸೂರ್ಯ ನಮಸ್ಕಾರ, ಜ.26ರಂದು ಸಂಗೀತ ಕಾರ್ಯಕ್ರಮ ಆಯೋಜಿಸಿ ಎಂದು ಅಧಿಸೂಚನೆ ಹೊರಡಿಸಿರುವುದು ಸಂವಿಧಾನದ ವಿರುದ್ಧವಾಗಿದೆ. ಇದು ಸಂವಿಧಾನ ನೀಡಿರುವ ಹಕ್ಕುಗಳ ಉಲ್ಲಂಘನೆಯಾಗಿದೆ. ಹಾಗಾಗಿ ಇವುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಭಾಗವಹಿಸಬಾರದು’ ಎಂದು ಎಐಎಂಪಿಎಲ್‌ಬಿಯ ಖಾಲಿದ್‌ ಸೈಫುಲ್ಲಾ ರೆಹಮಾನಿ ಆದೇಶ ಹೊರಡಿಸಿದ್ದಾರೆ.

‘ಸೂರ್ಯ ನಮಸ್ಕಾರವು ಅಸಾಂವಿಧಾನಿಕವಾಗಿದೆ. ಇದು ಹುಸಿ ದೇಶ ಭಕ್ತಿಯ ಪ್ರತೀಕವಾಗಿದೆ. ಹಾಗೆಯೇ, ದೇಶದಲ್ಲಿರುವ ಅಲ್ಪ ಸಂಖ್ಯಾತರು ಮೂರ್ತಿ ಪೂಜೆಯಲ್ಲಿ ನಂಬಿಕೆ ಇಟ್ಟಿಲ್ಲ. ಹಾಗಾಗಿ ಸರಕಾರವು ಇಂತಹ ಹೇರಿಕೆ ಬದಲು, ಜಾತ್ಯತೀತ ಭಾವನೆಗಳಿಗೆ ಗೌರವ ನೀಡಬೇಕು’ ಎಂದು ಹೇಳಿದ್ದಾರೆ. ‘ಮುಸ್ಲಿಮರು ಮೂರ್ತಿ ಪೂಜೆಯನ್ನು ನಂಬುವುದಿಲ್ಲ ಹಾಗೂ ಸೂರ್ಯನನ್ನು ದೇವರು ಎಂದು ಆರಾಧಿಸುವುದಿಲ್ಲ. ಹಾಗಾಗಿ ನಾವು ಇದನ್ನು ಕೇಂದ್ರ ಸರಕಾರದ ಗಮನಕ್ಕೆ ತರುತ್ತೇವೆ ಹಾಗೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಕ್ಕಳಿಗೆ ಸೂಚಿಸಿದ್ದೇವೆ’ ಎಂದು ಖಾಲಿದ್‌ ಸೈಫುಲ್ಲಾ ರೆಹಮಾನಿ ಹೇಳಿದ್ದಾರೆ.

Latest Indian news

Popular Stories

error: Content is protected !!