ಸ್ಥಿರಾಸ್ತಿ ಹಕ್ಕು ಬದಲಾವಣೆ: ತಹಶೀಲ್ದಾರ್, ಉಪ ತಹಶೀಲ್ದಾರ್‌ಗೆ ಹೆಚ್ಚಿನ ಅಧಿಕಾರ

ಸ್ಥಿರಾಸ್ತಿ ಹಕ್ಕು ಬದಲಾವಣೆ: ತಹಶೀಲ್ದಾರ್, ಉಪ ತಹಶೀಲ್ದಾರ್‌ಗೆ ಹೆಚ್ಚಿನ ಅಧಿಕಾರ

ಸ್ಥಿರಾಸ್ತಿಯ ಮಾಲಕತ್ವದ ಹಕ್ಕು ಬದಲಾವಣೆಗೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಉಪ ತಹಶೀಲ್ದಾರ್ ಮತ್ತು ತಹಶೀಲ್ದಾರ್‌ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.

ತಹಶೀಲ್ದಾರ್ ಹುದ್ದೆಯು ಶಿರಸ್ತೇದಾರ್ ಹುದ್ದೆಗೆ ಸಮಾನಾಂತರವಾಗಿದ್ದು, ಹೋಬಳಿ ವ್ಯಾಪ್ತಿಗೆ ಬರುವ ಸ್ಥಿರಾಸ್ತಿ ಮಾಲಕತ್ವ ಹಕ್ಕು ಬದಲಾವಣೆ ಪ್ರಕರಣಗಳನ್ನು ಉಪ ತಹಶೀಲ್ದಾರ್ ಇತ್ಯರ್ಥಪಡಿಸಲು ಹಾಗೂ ಕಸಬಾ ಹೋಬಳಿಯ ಪ್ರಕರಣಗಳನ್ನು ತಹಶೀಲ್ದಾರ್ ಇತ್ಯರ್ಥಪಡಿಸಲು ಸರ್ಕಾರ ಆದೇಶ ಹೊರಡಿಸಿದೆ.

ಸದನದಲ್ಲಿ ಶಾಸಕ ಯು.ಟಿ. ಖಾದರ್ ಪ್ರಶ್ನೆಗೆ ಕಂದಾಯ ಸಚಿವರು ಈ ಉತ್ತರ ನೀಡಿದ್ದಾರೆ. ಸದ್ಯ ಬಾಕಿ ಇರುವ ಪ್ರಕರಣಗಳ ಸಹಿತ ತಕರಾರು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕಂದಾಯ ಅರೆ ನ್ಯಾಯಿಕ ಪ್ರಕರಣಗಳನ್ನು ಪ್ರತಿ ಮಂಗಳವಾರ ಮತ್ತು ಗುರುವಾರ ತಪ್ಪದೆ ವಿಚಾರಣೆ ನಡೆಸಬೇಕು ಮತ್ತು ಕಾಲಮಿತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ. ಅದೇ ರೀತಿ, ಕಂದಾಯ ಅರೆ ನ್ಯಾಯಿಕ ಪ್ರಕರಣಗಳು ಹಾಗೂ ಅಪೀಲು, ಮೇಲ್ಮನವಿಗಳನ್ನು ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ನಿರ್ದೇಶನದಲ್ಲಿ ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3371 ಪ್ರಕರಣಗಳು ಬಾಕಿ ಇದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಂದಾಯ ನ್ಯಾಯಾಲಯಗಳಾದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

Latest Indian news

Popular Stories