‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ ಕಂಬ್ಯಾಕ್: ಮಂಡ್ಯ ಜಿಲ್ಲೆಯಲ್ಲಿ ‘ಕೈ’ ಅಭ್ಯರ್ಥಿಗಳ ಪರ ಪ್ರಚಾರ

ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಮತ್ತೆ ರಾಜಕೀಯದಲ್ಲಿ ಆಕ್ಟಿವ್ ಆಗಿದ್ದಾರೆ. ಇಂದು ಸೋಮವಾರ ಅವರು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. 

ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಎಲ್ಲಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ್ನು ಸೋಲಿಸಿ ಜೆಡಿಎಸ್ ಜಯಭೇರಿ ಬಾರಿಸಿತ್ತು.

ಇತ್ತೀಚೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದ ರಮ್ಯಾ ಮುಂದಿನ ಕೆಲ ದಿನಗಳ ಕಾಲ ಮಂಡ್ಯದಲ್ಲಿ ಬಿರುಸಿನಿಂದ ಕೈ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. 

2018ರ ಫಲಿತಾಂಶವನ್ನು ನೋಡಿದರೆ ಮಳವಳ್ಳಿಯಲ್ಲಿ ಕಾಂಗ್ರೆಸ್ ಜನತಾ ದಳಕ್ಕೆ ಸುಮಾರು 28,000 ಮತಗಳಲ್ಲಿ, ಮದ್ದೂರಿನಲ್ಲಿ ಸುಮಾರು 55,000, ಶ್ರೀರಂಗಪಟ್ಟಣದಲ್ಲಿ ಸುಮಾರು 43,000, ನಾಗಮಂಗಲದಲ್ಲಿ ಸುಮಾರು 47,000, ಕೆ.ಆರ್.ಪೇಟೆಯಲ್ಲಿ 17,000 ಮತಗಳ ಹತ್ತಿರದಲ್ಲಿ ಸೋಲು ಕಂಡಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿಯಿದೆ. ಆದರೆ ಕೆ.ಆರ್.ನಗರದಲ್ಲಿ ಕಳೆದ ಬಾರಿ ಕೇವಲ 1,800 ಮತಗಳಿಂದ ಸೋತಿದ್ದು,ಈ ಬಾರಿ ಅಲ್ಲಿ ಪಕ್ಷಕ್ಕೆ ಗೆಲುವಿನ ನಿರೀಕ್ಷೆಯಿದೆ.

“ರಮ್ಯಾ ಅವರು ನಮ್ಮ ಸ್ಟಾರ್ ಪ್ರಚಾರಕಿ. ಅವರು ಎಲ್ಲಿ ಪ್ರಚಾರ ಮಾಡಬೇಕೆಂಬುದನ್ನು ಪಕ್ಷದ ಘಟಕ ನಿರ್ಧರಿಸಲಿದೆ. ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರು ಪ್ರಮುಖ ಜಿಲ್ಲೆಗಳಲ್ಲಿ ಪ್ರಚಾರ ಮಾಡುವ ನಿರೀಕ್ಷೆಯಿದೆ,’’ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಜನತಾ ಪಕ್ಷ ಹಾಗೂ ಜೆಡಿಎಸ್ ನಿಂದ ನಾಲ್ಕು ಬಾರಿ ಮಳವಳ್ಳಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದ ಮಾಜಿ ಸಚಿವ ಬಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಮದ್ದೂರಿನಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾರೆ. ಕೆಆರ್ ಪೇಟೆ ಮತ್ತು ಮೇಲುಕೋಟೆಯಲ್ಲಿ ಸಹ ಉತ್ತಮ ಫಲಿತಾಂಶ ಸಿಗಬಹುದು ಎಂದಿದ್ದಾರೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಗೆ ಕಡಿಮೆ ಸೀಟು ಬರುವ ಸಾಧ್ಯತೆ ಹೆಚ್ಚಾಗಿದೆ. ರಮ್ಯಾ ಮಂಡ್ಯದಲ್ಲಿ ಪ್ರಚಾರ ನಡೆಸಿದರೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಳ್ಳೆಯದು ಎನ್ನುತ್ತಾರೆ.

ಇನ್ನು ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ ಅವರು ‘ಸ್ಯಾಂಡಲ್ವುಡ್ ಕ್ವೀನ್’ ಅವರಿಗೆ ಪೈಪೋಟಿಯಾಗಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದು ಅವರ ಪ್ರಭಾವ ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗಲು ಸಹಾಯವಾಗಲಿದೆ ಎಂದು ನೋಡಬೇಕಿದೆ. 

Latest Indian news

Popular Stories