ಸ್ವಚ್ಛ ನಗರವಾಗಿಸಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯ ಈಡೇರಿಸಿ: ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ ಸದಾಶಯ

ವಿಜಯಪುರ : ಸಹಸ್ರಮಾನದ ಸಂತ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಸದಾಶಯದಂತೆ `ಒಳಗೂ ಸ್ವಚ್ಛ – ಹೊರಗು ಸ್ವಚ್ಚ’ ಎಂಬಂತೆ ವಿಜಯಪುರ ನಗರ ಸ್ವಚ್ಛತೆಯ ಕೇಂದ್ರಬಿಂದುವಾಗಬೇಕು, ಈ ನಿಟ್ಟಿನಲ್ಲಿ ಪ್ರತಿ 15 ದಿನಗಳಿಗೊಮ್ಮೆ ಈ ವಿಷಯಾಗಿ ಪರಿವೀಕ್ಷಣೆ ಮಾಡುವಂತೆ ಲೋಕಾಯುಕ್ತ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ, ಶೀಘ್ರದಲ್ಲಿಯೇ ಬದಲಾವಣೆ ಕಾಣಬೇಕು ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ ಹೇಳಿದರು.

ವಿಜಯಪುರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ವಿಜಯಪುರ ಐತಿಹಾಸಿಕ ಸ್ಮಾರಕಗಳ ನೆಲೆವೀಡು, ವಿದೇಶಿ ಪ್ರವಾಸಿಗರ ನೆಚ್ಚಿನ ತಾಣ, ಆದರೆ ಸ್ವಚ್ಛತೆಯೇ ಕಾಣುವುದಿಲ್ಲವೆಂದರೆ ಜಿಲ್ಲೆಯ ಮರ್ಯಾದೆ ಏನಾಗಬೇಡ? ಎಂದು ಪ್ರಶ್ನಿಸಿದ ಅವರು ಪಾಲಿಕೆ ಅವರಿಗಾದರೂ ಸ್ವಚ್ಛತೆಗೆ ಅವಕಾಶ ಕೊಡಿ ಇಲ್ಲವಾದಲ್ಲಿ ನೀವಾದರೂ ಮಾಡಿ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇದು ನಮ್ಮ ಊರು ನಮ್ಮ ಊರು ಸುಂದರವಾಗಿಡೋಣ ಎಂಬ ಒಂದೇ ಒಂದು ಬೋರ್ಡ್ ನೋಡಲಿಲ್ಲ. ಜನರಿಗೆ ಸ್ವಚ್ಛತೆಗೆ ಪ್ರೇರೇಪಿಸಬೇಕು. ವೈಯಕ್ತಿಕವಾಗಿ, ಸಾಮೂಹಿಕವಾಗಿ ಸ್ವಚ್ಛತೆಗೆ ಶ್ರಮಿಸಬೇಕೆಂದರು. ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಊರಲ್ಲೆಲ್ಲ ಸ್ವಚ್ಛಗೊಳಿಸುತ್ತಿದ್ದರು. ಹಾಗೆಯೇ ಎಲ್ಲ ಮಕ್ಕಳು, ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಕೊಳಚೆ ನೀರು ಎಲ್ಲಿಯೂ ಸಂಗ್ರಹಣೆಯಾಗದಂತೆ ನೋಡಿಕೊಳ್ಳಿ, ಖಾಸಗಿ ನಿವೇಶನ ಹಾಗೂ ಲೇಔಟ್‌ಗಳಲ್ಲಿ ಜಾಲಿಕಂಟಿ ಬೆಳೆಯದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ, ಇಲ್ಲಿ ಜಾಲಿಕಂಟಿಗಳು ಬೆಳೆದರೆ ಅನೇಕ ರೋಗಗಳ ಉಲ್ಭಣಕ್ಕೆ ದಾರಿಯಾಗುತ್ತದೆ, ಹೀಗಾಗಿ ಎಲ್ಲಿಯೂ ಸಹ ಜಾಲಿ ಕಂಟಿಗಳು, ಕಸ ರಾರಾಜಿಸದಂತೆ ನೋಡಿಕೊಳ್ಳಿ, ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಎಂದರು. ಮುಂದಿನ 15 ದಿನಗಳಲ್ಲಿ ವಿಜಯಪುರ ನಗರ ಬದಲಾವಣೆ ಕಾಣಬೇಕು, ಬದಲಾವಣೆ ತರುವುದೇ ನನ್ನ ಬದ್ಧತೆ ಎಂದರು.

ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವ ಅಧಿಕಾರ ಕರ್ನಾಟಕ ಲೋಕಾಯುಕ್ತಕ್ಕೆ ಇದೆ, ದೂರು ದಾಖಲಿಸಿಕೊಂಡು ಅಧಿಕಾರಿಗಳಿಗೆ ವಿವರಣೆ ಕೇಳುವ ಅಧಿಕಾರ ಎನ್ನುವುದಕ್ಕಿಂತ ಜವಾಬ್ದಾರಿ ಲೋಕಾಯುಕ್ತಕ್ಕೆ ಇದೆ, ಉದಾಹರಣೆಗೆ ಭೂಮಿ ಸ್ವರೂಪ ಬದಲಾವಣೆಗೆ ಸಂಬಂಧಿಸಿದಂತೆ ಸರ್ವರ್ ಡೌನ್ ಇದೆ, ಕ್ಲಾರ್ಕ್ ಬಂದಿಲ್ಲ ಎಂಬ ನೆಪ ನೀಡಿ ಜವಾಬ್ದಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದರೆ ಅದು ನಾಗರಿಕರ ಹಕ್ಕಿನ ಉಲ್ಲಂಘನೆ, ಈ ರೀತಿಯ ಪ್ರಕರಣದಲ್ಲಿ ನಾಗರಿಕರು ವೈಯುಕ್ತಿಕವಾಗಿಯೂ ದೂರು ದಾಖಲಿಸುವ ಅವಕಾಶವಿದೆ ಎಂದರು.

ಅತೀ ಭ್ರಷ್ಟ ಅಧಿಕಾರಿಗಳ ಪಟ್ಟಿ ತಯಾರಿಸಿ
ವಿಜಯಪುರ ಜಿಲ್ಲೆಯಲ್ಲಿರುವ ಅತೀ ಭ್ರಷ್ಟ ಅಧಿಕಾರಿಗಳ ಪಟ್ಟಿ ತಯಾರಿಸಿ ಎಂದು ಲೋಕಾಯುಕ್ತ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ, ಅತೀ ಭ್ರಷ್ಟರು ಎಂದು ಅನಿಸುವ ಅಧಿಕಾರಿಗಳ ಅವರ ಆಸ್ತಿ ವಿವರವನ್ನು ಕಲೆ ಹಾಕಿ, ಅವರು ಬೆಂಗಳೂರಿನಲ್ಲಿ ಎಷ್ಟು ಸೈಟ್ ಮಾಡಿದ್ದಾರೆ? ಮೈಸೂರಿನಲ್ಲಿ ಎಷ್ಟು ಸೈಟ್ ಮಾಡಿದ್ದಾರೆ? ವಿಜಯಪುರದಲ್ಲಿ ಎಷ್ಟು ಸೈಟ್ ಮಾಡಿದ್ದಾರೆ ಎಂಬುದನ್ನು ಕಲೆಹಾಕುವ ಜೊತೆಗೆ ಅವರ ಪೂರ್ವಾಪರ ಸಂಗ್ರಹಿಸಲು ಸೂಚಿಸಲಾಗಿದೆ. ಆರ್ಥಿಕ ದುರ್ಬಲ ವರ್ಗದ ಅಡಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅನೇಕ ಅಧಿಕಾರಿಗಳು ಇಂದು ಕುಬೇರರಾಗಿದ್ದಾರೆ, ಈ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ವಿನಾಕಾರಣ ನಾವು ಅಧಿಕಾರಿಗಳಿಗೆ ತೊಂದರೆ ನೀಡುವುದಿಲ್ಲ, ದುರದ್ದೇಶಪೂರ್ವಕವಾಗಿ ಬಂದ ಅಲಿಗೇಷನ್‌ಗಳನ್ನು 10 ಸಾರಿ ವಿಚಾರಿಸಿಯೇ ಮುಂದಿನ ಪ್ರಕ್ರಿಯೆಗೆ ನಾವು ಅಣಿಯಾಗುತ್ತೇವೆ, ಲೋಕಾಯುಕ್ತದ ಬಗ್ಗೆ ಅಧಿಕಾರಿಗಳಲ್ಲಿ ಭಯಬೇಡ ಎಂದರು.

ದುರುದ್ದೇಶಪೂರ್ವಕವಾಗಿ, ದುರಾಸೆಯಿಂದಾಗಿ ಸರ್ಕಾರಿ ಹಣ ಲೂಟಿ ಮಾಡುವವರನ್ನು ಬೇಟೆ ಮಾಡುವ ಸಮಯ ಬಂದಿದೆ ಎಂದು ಪಾಟೀಲ ಹೇಳಿದರು.

ಯುದ್ಧೋಪಾದಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿ
ಉತ್ತರ ಕರ್ನಾಟಕ ಭಾಗದಲ್ಲಿ ಚರಿಗೆ ಹಿಡಿದು ಹೊರಗೆ ಹೋಗುವವರೇ ಅಧಿಕ, ಕಾರು, ಬೈಕ್ ಹೊಂದಿದವರು ಸಹ ಶೌಚಾಲಯ ನಿರ್ಮಾಣಕ್ಕೆ ಅಸಡ್ಡೆ ತೋರುತ್ತಿದ್ದಾರೆ, ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಾಣವಾಗಬೇಕು, ಯುದ್ಧೋಪಾದಿಯಲ್ಲಿ ಈ ಕಾರ್ಯ ನಡೆಯಬೇಕು, ಬರೀ ಶೌಚಾಲಯ ಕೊಟ್ಟರೆ ಸಾಲದು ಅದಕ್ಕೆ ಪೂರಕವಾದ ಇಂಗುಗುಂಡಿ, ನೀರಿನ ಸಂಪರ್ಕ ಒದಗಿಸಬೇಕು, ದೊಡ್ಡ ಕುಟುಂಬಗಳಿಗೆ ಸಮುದಾಯ ಶೌಚಾಲಯದಲ್ಲಿಯೇ ಒಂದು ಪ್ರತ್ಯೇಕವಾದ ಶೌಚಾಲಯವನ್ನು ಅವರ ಸುಪರ್ದಿಗೆ ಒದಗಿಸಿ ಅದನ್ನು ಸ್ವಚ್ಛವಾಗಿರಿಸಿಕೊಳ್ಳುವ ಹೊಣೆಗಾರಿಕೆಯನ್ನು ಆಯಾ ಕುಟುಂಬಕ್ಕೆ ಒದಗಿಸಬೇಕು ಎಂದು ಸಲಹೆ ನೀಡಿದರು.

ಜನಪ್ರತಿನಿಧಿ, ಸ್ಥಳೀಯ ಶಿಕ್ಷಕರ ಸಹಕಾರ ಪಡೆದುಕೊಂಡು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕಾರ್ಯ ಸಾಕಾರಗೊಳಿಸಿ, ವಿನಾಕಾರಣ ಜನರ ಬಳಿ ಜಗಳವಾಡಲು ಹೋಗಬೇಡಿ, ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಈ ಕಾರ್ಯ ಅನುಷ್ಠಾನಗೊಳಿಸಿ ಎಂದರು.

ಸಿಇಓ ರಾಹುಲ್ ಶಿಂಧೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ 300803 ಕುಟುಂಬಗಳ ಪೈಕಿ 289394 ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿದ್ದು, ಶೇ.96.11 ರಷ್ಟು ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಲಾಗಿದೆ, 11409 ಕುಟುಂಬಗಳಿಗೆ ಶೌಚಾಲಯ ಸೌಲಭ್ಯ ಒದಗಿಸಲು ವಿವಿಧ ರೀತಿಯ ಕಾರ್ಯಚಟುವಟಿಕೆಗಳ ಮೂಲಕ ಶ್ರಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ, ಎಸ್.ಪಿ. ಎಚ್.ಡಿ. ಆನಂದಕುಮಾರ, ಸಿಇಓ ರಾಹುಲ್ ಶಿಂಧೆ, ಲೋಕಾಯುಕ್ತ ಎಸ್.ಪಿ. ಅನೀತಾ ಹದ್ದಣ್ಣವರ, ಎಡಿಸಿ ರಮೇಶ ಕಳಸದ ಸಭೆಯಲ್ಲಿ ಪಾಲ್ಗೊಂಡಿದ್ದರು.

Latest Indian news

Popular Stories