ಸ್ವತಂತ್ರ ಸಂಸ್ಥೆಯ ಸಮೀಕ್ಷೆಯಲ್ಲಿ ಕಾಂಗ್ರೆಸ್’ಗೆ 108-114 ಸ್ಥಾನ; ಬಿಜೆಪಿಗೆ ಹಿನ್ನಡೆ

ಬೆಂಗಳೂರು: ಹೊರರಾಜ್ಯಗಳ ಸ್ವತಂತ್ರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ 108 ರಿಂದ 114 ಸ್ಥಾನಗಳನ್ನು ಗೆಲ್ಲಲಿದ್ದು, ಆಡಳಿತಾರೂಢ ಬಿಡೆಪಿ 65 ರಿಂದ 75 ಮತ್ತು ಜೆಡಿಎಸ್ 24 ರಿಂದ 34 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

ನವೆಂಬರ್ 20 ರಿಂದ ಜನವರಿ 15 ರವರೆಗೆ ರಾಜ್ಯದಲ್ಲಿ ಐಪಿಎಸ್ಎಸ್ ತಂಡದ ಸಹಯೋಗದೊಂದಿಗೆ ಹೈದರಾಬಾದ್‌ನ ಎಸ್ಎಎಸ್ ಗುಂಪು ನಡೆಸಿದ ಸಮೀಕ್ಷೆಯಲ್ಲಿ, ಕಾಂಗ್ರೆಸ್ ತನ್ನ ಮತಗಳನ್ನು ಶೇ 38.14 ರಿಂದ ಶೇ 40 ಕ್ಕೆ (ಶೇ 1.86ರಷ್ಟು) ಹೆಚ್ಚಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಬಿಜೆಪಿಯು ತನ್ನ ಮತಗಳಿಕೆಯಲ್ಲಿ ಶೇ 36.35 ರಿಂದ ಶೇ 34 ಕ್ಕೆ (ಶೇ 2.35ರಷ್ಟು) ಕುಸಿತವನ್ನು ಕಾಣಲಿದೆ. ಜೆಡಿಎಸ್ ಕೂಡ 1.3 ಪರ್ಸೆಂಟ್ ಇಳಿಕೆಯೊಂದಿಗೆ 18.3 ಪರ್ಸೆಂಟ್ ನಿಂದ 17 ಪರ್ಸೆಂಟ್‌ ಮತಗಳಿಕೆಯನ್ನು ಕಾಣಬಹುದು. ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರರು ಶೇ 6 ರಷ್ಟು ಮತ ಗಳಿಸಬಹುದು. ಸಣ್ಣ ಪಕ್ಷಗಳು ಮತ್ತು ಸ್ವತಂತ್ರರು ಏಳು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.

ಬೆಂಗಳೂರು ನಗರದಲ್ಲಿ 13 ರಿಂದ 14 ಮಂದಿ ಕಾಂಗ್ರೆಸ್ ಶಾಸಕರು ಹಾಗೂ ಬಿಜೆಪಿಯಿಂದ ಕೇವಲ 9 ರಿಂದ 10 ಮಂದಿ ಸದಸ್ಯರು ಆಯ್ಕೆಯಾಗಬಹುದು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭಾರಿ ಕಸರತ್ತು ನಡೆಸುತ್ತಿದ್ದು, ಕೇವಲ 10-14 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಬಹುದು. ಕಾಂಗ್ರೆಸ್ 24 ರಿಂದ 25 ಸ್ಥಾನಗಳನ್ನು ಗಳಿಸಬಹುದು. ಜೆಡಿಎಸ್ 21 ರಿಂದ 22 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

ಬೆಳಗಾವಿ ಅಥವಾ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 27 ರಿಂದ 28 ಮತ್ತು ಬಿಜೆಪಿ 14 ರಿಂದ 16 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಕೇಸರಿ ಪಕ್ಷ 12 ರಿಂದ 13 ಸ್ಥಾನಗಳಲ್ಲಿ ವಿಜಯ ಸಾಧಿಸಬಹುದು. ಆದರೆ ಕಾಂಗ್ರೆಸ್ ಏಳರಿಂದ ಎಂಟು ಸ್ಥಾನಗಳನ್ನು ಮಾತ್ರ ಗೆಲ್ಲಬಹುದು.

ಹೈದರಾಬಾದ್-ಕರ್ನಾಟಕದಲ್ಲಿ ಬಿಜೆಪಿಯ ಮಾಜಿ ನಾಯಕ ಜನಾರ್ದನ ರೆಡ್ಡಿಗೆ ಅಖಾಡ ಕಷ್ಟವಾಗಿ ಪರಿಣಮಿಸಬಹುದು. ಇಲ್ಲಿ ಬಿಜೆಪಿ 12 ರಿಂದ 14 ಸ್ಥಾನಗಳನ್ನು ಪಡೆಯಬಹುದು ಮತ್ತು ಕಾಂಗ್ರೆಸ್ 21 ರಿಂದ 22 ಸ್ಥಾನಗಳನ್ನು ಗೆಲ್ಲಬಹುದು. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 16 ರಿಂದ 17 ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿ ಕೇವಲ 8 ರಿಂದ 9 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಹೇಳಿದ್ದಕ್ಕೆ ರಾಜ್ಯದ ಮತದಾರರಲ್ಲಿ ಕೋಪವಿದ್ದು, ಹಲವು ಸ್ಥಾನಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಸಮೀಕ್ಷೆ ತೋರಿಸಿದೆ.

ಹಿಂದುಳಿದ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಕಾಂಗ್ರೆಸ್‌ಗೆ ಗರಿಷ್ಠ ಬೆಂಬಲ ಸಿಗಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಒಕ್ಕಲಿಗರು ಯಾರನ್ನು ಬೆಂಬಲಿಸುತ್ತಾರೆ ಎಂಬುದರ ಕುರಿತು ಸಮೀಕ್ಷೆಯು ಶೇ 50 ರಷ್ಟು ಜೆಡಿಎಸ್, 38 ಪ್ರತಿಶತ ಕಾಂಗ್ರೆಸ್ ಮತ್ತು 10 ಪ್ರತಿಶತ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಿದೆ.

ಕೊಪ್ಪಳ, ಗಂಗಾವತಿ, ಬಳ್ಳಾರಿ, ಕೋಲಾರ, ದಾವಣಗೆರೆ ಮತ್ತು ರಾಯಚೂರಿನಲ್ಲಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ನಿರ್ಣಾಯಕ ಅಂಶವಾಗಬಹುದು ಮತ್ತು ಹೊಸ ಪಕ್ಷವು ಕೆಲವು ಸ್ಥಾನಗಳಲ್ಲಿ ಮಾತ್ರ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಎಐಎಂಐಎಂ ಸ್ಪರ್ಧಿಸಿದರೆ, ಅದು ಕೇವಲ ಆರರಿಂದ ಏಳು ಸ್ಥಾನಗಳಲ್ಲಿ ಮತ ಹಂಚಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಅದು ಹೇಳಿದೆ.

Latest Indian news

Popular Stories