ಹನ್ನೊಂದು ವರ್ಷಗಳಿಂದ ನನಗೆ ಇದ್ದ ಗನ್ ಮ್ಯಾನ್ ವಾಪಸು; ಭಯ ಉಂಟಾಗಿದೆ – ಬಿಜೆಪಿ ಮುಖಂಡ ರಹೀಮ್ ಉಚ್ಚಿಲ

ಮಂಗಳೂರು: ಹನ್ನೊಂದು ವರ್ಷಗಳಿಂದ ನನಗೆ ಇದ್ದ ಗನ್ ಮ್ಯಾನ್ ಭದ್ರತೆಯನ್ನು ಚುನಾವಣೆ ಘೋಷಣೆಯಾದ ದಿನದಿಂದ ವಾಪಸ್ ಪಡೆಯಲಾಗಿದ್ದು ಇದರಿಂದ ಭಯ ಉಂಟಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಹೀಂ‌ ಉಚ್ಚಿಲ್ ಹೇಳಿದ್ದಾರೆ.

ಸೋಮವಾರ ತಾಯಿ ಜತೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 2012 ರಲ್ಲಿ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಏಳು ಮಂದಿಯ ತಂಡ ಕಚೇರಿಗೆ ನುಗ್ಗಿ ಯದ್ವಾತದ್ವಾ ಕೊಚ್ಚಿ ಕೊಲೆಯತ್ನ ನಡೆಸಿತ್ತು. ಅದರಲ್ಲಿ ಇಬ್ಬರು ಆರೋಪಿಗಳ ಆರೋಪ ಸಾಬೀತಾಗಿ ನ್ಯಾಯಾಲಯ ನಾಲ್ಕೂವರೆ ವರ್ಷ ಸಜೆ ವಿಧಿಸಿದೆ. ಆರೋಪಿಗಳು ಇದರ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ ತೀರ್ಪು ಬರುವ ಮೊದಲೇ ಗನ್ ಮ್ಯಾನ್ ಭದ್ರತೆ ವಾಪಸ್ ಪಡೆದುಕೊಳ್ಳಲಾಗಿದೆ.

ನನಗೆ‌ ಬಂದಿರುವ ಬೆದರಿಕೆ ಕರೆಗಳ ಪೈಕಿ ಗಂಭೀರವಾದ ಬೆದರಿಕೆ ಬಗ್ಗೆ 30 ಕ್ಕಿಂತಲೂ ಅಧಿಕ ದೂರುಗಳು ಮಂಗಳೂರು ದಕ್ಷಿಣ ಠಾಣೆ, ಹುಬ್ಬಳ್ಳಿ ಮೊದಲಾದೆಡೆ ದಾಖಲಾಗಿದೆ. ಆದರೂ ಗನ್ ಮ್ಯಾನ್ ವಾಪಸ್ ಪಡೆದಿರುವುದು ಆಶ್ಷರ್ಯವನ್ನುಂಟು ಮಾಡಿದೆ. ದುಷ್ಕರ್ಮಿಗಳ ಭಯದಿಂದ ತಾಯಿಯೊಂದಿಗೆ ಓಡಾಡುತ್ತಿದ್ದೇನೆ ಎಂದವರು ಹೇಳಿದ್ದಾರೆ.

ನಾನು ಯಾವುದೇ ಧರ್ಮ, ಸಮುದಾಯದವರ ವಿರುದ್ದವಾಗಿ ನಡೆದುಕೊಂಡಿಲ್ಲ. ಕೆಲವರು ನನ್ನ ವಿಚಾರಗಳನ್ನು ತಪ್ಪಾಗಿ ತಿಳಿದುಕೊಂಡು ನನ್ನ ಹತ್ಯೆಗೆ ಯತ್ನಿಸುತ್ತಿದ್ದರೆ ಅವರ ಕ್ಷಮೆ ಕೋರುತ್ತೇನೆ. ತಾಯಿಗಾಗಿ ನಾನು ಬದುಕಬೇಕಾಗಿದೆ. ನಾನು ರಾಷ್ಟ್ರೀಯತೆಗೆ ಪೂರಕವಾದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆಯೇ ಹೊರತು ಯಾರ ಮನ ನೋಯಿಸುವ ಕೆಲಸವನ್ನು ಮಾಡಿಲ್ಲ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ತೊರೆಯುವುದಿಲ್ಲ. ನನಗೆ ಎರಡು ಬಾರಿ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಸ್ಥಾನ ನೀಡಿದ ಬಿಜೆಪಿಗೆ ಸದಾ ಋಣಿಯಾಗಿದ್ದೇನೆ. ಬೇರೆ ರಾಜಕೀಯ ಪಕ್ಷ ಸೇರುವುದಿಲ್ಲ. ನನಗೆ ಗನ್ ಮ್ಯಾನ್ ಭದ್ರತೆ ಮುಂದುವರೆಸುವಂತೆ ಡಿಸಿಪಿಯವರಿಗೆ ಮನವಿ ಮಾಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ನನ್ನ ಜೀವಕ್ಕೆ ಅಪಾಯ ಸಂಭವಿಸಿದರೆ ಯಾರೂ ಕಾರಣರಲ್ಲ, ನನ್ನ ಆಯುಷ್ಯವೇ ಕಾರಣವಾಗಿರುತ್ತದೆ ಎಂದು ರಹೀಂ ಉಚ್ಚಿಲ್ ಹೇಳಿದ್ದಾರೆ.

Latest Indian news

Popular Stories