ಮೈಸೂರು: ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್‌ನ ಹಿರಿಯ ನಾಯಕರು. ಅವರು ಸಾಕಷ್ಟು ಸಿಎಂಗಳನ್ನು ಮಾಡಿದ್ದಾರೆ. ಆದರೆ ಹರಿಪ್ರಸಾದ್ ಆ ರೀತಿ ಹೇಳಿಕೆ ನೀಡಿರಲಾರರು. ಇದೆಲ್ಲವೂ ಮಾದ್ಯಮಗಳ ಸೃಷ್ಟಿ. ನಾನು ಹರಿಪ್ರಸಾದ್ ಏನು ಹೇಳಿದ್ದಾರೆ ನೋಡಿಲ್ಲ. ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಈ ಮೈಸೂರು ಪ್ರವಾಸ ಅಧ್ಯಯನ ಪ್ರವಾಸವಾಗಿದೆ. ಪ್ರವಾಸೋದ್ಯಮಕ್ಕೆ ಮೈಸೂರಿನಲ್ಲಿ ಸಾಕಷ್ಟು ಅವಕಾಶವಿದೆ. ಹಳೆ ಜಿಲ್ಲಾಧಿಕಾರಿ ಕಚೇರಿಯನ್ನು ಪ್ರವಾಸಿ ತಾಣ ಮಾಡುವ ಉದ್ದೇಶವಿದೆ. ಸಾಕಷ್ಟು ಪ್ರವಾಸಿ ತಾಣಗಳು ಜನರಿಗೆ ಲಭ್ಯವಾಗಿಲ್ಲ. ಪಾರಂಪರಿಕ ಕಟ್ಟಡಗಳಿಗೆ ಕಾಯಕಲ್ಪ ಕಲ್ಪಿಸಲಾಗುವುದು. ಜೊತೆಗೆ ಅದನ್ನು ಪ್ರವಾಸಿಗರಿಗೆ ತಲುಪಿಸಬೇಕಿದೆ ಎಂದರು.
ಇಂದು ಮೈಸೂರಿನಲ್ಲಿ ಸಭೆ ನಡೆಸಿ ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಬಜೆಟ್ ನಲ್ಲಿ ಯಾವೆಲ್ಲ ಯೋಜನೆ ಘೋಷಣೆ ಮಾಡಿದ್ದೇವೆ. ಅದನ್ನೆಲ್ಲ ಕಾರ್ಯ ರೂಪಕ್ಕೆ ತರುತ್ತೇವೆ ಎಂದು ಅವರು ಹೇಳಿದರು.