ನವದೆಹಲಿ: ದೇಶಾದ್ಯಂತ ಹಾತ್ ಸೇ ಹಾತ್ ಜೋಡೊ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಚಾಲನೆ ನೀಡಿದೆ.
ಮೋದಿ ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸುವ ಉದ್ದೇಶಕ್ಕಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಟ್ವಿಟರ್ ನಲ್ಲಿ ಕಾಂಗ್ರೆಸ್ ಈ ಬಗ್ಗೆ ಮಾಹಿತಿ ನೀಡಿದು, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವನ್ನು ನಾವು ಇಂದು ಆಚರಿಸುತ್ತಿದ್ದೇವೆ ಇದೇ ಸಂದರ್ಭದಲ್ಲಿ ನಾವು ಹಾತ್ ಸೆ ಹಾತ್ ಜೋಡೋ ಅಭಿಯಾನಕ್ಕೆ ಚಾಲನೆ ನೀಡಲಿದ್ದೇವೆ. ಭಾರತ್ ಜೋಡೋ ಯಾತ್ರೆಗೆ ಅತೀವವಾದ ಪ್ರೀತಿ ವಿಶ್ವಾಸಗಳು ಲಭಿಸಿತ್ತು ಅಂತೆಯೇ ಹಾತ್ ಸೇ ಹಾತ್ ಜೋಡೋ ಅಭಿಯಾನ ಸಹ ಎಲ್ಲರ ಮನ ಗೆಲ್ಲಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.
ಪತ್ರದ ರೂಪದಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಪಟ್ಟಿ ತಯಾರಿಸಲಿದ್ದು, ಅದನ್ನು ಪ್ರತಿಯೊಂದು ಮನೆಗೂ ತಲುಪಿಸುವ ಕೆಲಸ ಹಾತ್ ಸೇ ಹಾತ್ ಜೋಡೋ ಅಭಿಯಾನದಲ್ಲಿ ಆಗಲಿದೆ.
ಈ ಅಭಿಯಾನ ಮಾ.26ಕ್ಕೆ ಪೂರ್ಣಗೊಳ್ಳಲಿದ್ದು, ಪಕ್ಷದ ಕಾರ್ಯಕರ್ತರು 2.5 ಲಕ್ಷ ಗ್ರಾಮ ಪಂಚಾಯಿತಿಗಳನ್ನು ತಲುಪಲಿದ್ದು 6 ಲಕ್ಷ ಗ್ರಾಮಗಳು ಹಾಗೂ 10 ಲಕ್ಷ ಬೂತ್ ಗಳನ್ನು ತಲುಪಲಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಹಾತ್ ಸೇ ಹಾತ್ ಜೋಡೋ ಯಾತ್ರೆ ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಮುಂದಕ್ಕೆಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸಂಘಟನೆ ದುರ್ಬಲವಾಗಿರುವುದರಿಂದ ಈ ಟಾಸ್ಕ್ ಯಶಸ್ವಿಗೊಳಿಸುವುದು ಕಷ್ಟವಾಗಬಹುದು ಎಂದೂ ಜೈರಾಮ್ ರಮೇಶ್ ಹೇಳಿದ್ದಾರೆ.