ಹಾಸನದಲ್ಲಿ ಬದಲಾದ ಬಿಜೆಪಿ ರಣತಂತ್ರ: ಹೊಳೆನರಸಿಪುರದಲ್ಲಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಕಣಕ್ಕೆ! 

ಹಾಸನ: ರಾಜ್ಯ ವಿಧಾನಸಭಾ ಚುನಾವಣೆಗೆ ಹಲವು ಕ್ಷೇತ್ರಗಳಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ, ಹಾಸನದಲ್ಲಿ ಕೊನೆ ಕ್ಷಣದಲ್ಲಿ ರಣತಂತ್ರವನ್ನು ಬದಲಾಯಿಸಿದೆ. 

ನಾಮಪತ್ರ ಸಲ್ಲಿಕೆಗೆ ಗಡುವು ಮುಕ್ತಾಯಗೊಳ್ಳಲು ಇನ್ನು ಕೆಲವೇ ಗಂಟೆಗಳಿದ್ದಾಗ ಹಾಸನ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಪ್ರೀತಂ ಗೌಡ ಅವರ ಪತ್ನಿ ಕಾವ್ಯ ಅವರಿಂದ ನಾಮಪತ್ರ ಸಲ್ಲಿಸಿದ್ದ ಬಿಜೆಪಿ, ಈಗ ಮತ್ತೊಂದು ಅಚ್ಚರಿಯ ಹೆಜ್ಜೆ ಇಟ್ಟಿದೆ. 

ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ರೇವಣ್ಣ ವಿರುದ್ಧ ಬಿಜೆಪಿ ಪ್ರೀತಮ್ ಗೌಡ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. 

ಕನಕಪುರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಆರ್ ಅಶೋಕ್ ಹಾಗೂ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿ ಪ್ರಯೋಗಿಸಿದ್ದ ಅಸ್ತ್ರವನ್ನೇ ಹೊಳೆನರಸಿಪುರದಲ್ಲೂ ಬಿಜೆಪಿ ಪ್ರಯೋಗಿಸುತ್ತಿರುವ ಬಿಜೆಪಿ ಪ್ರೀತಮ್ ಗೌಡ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.

ಈಗಾಗಲೇ ಪ್ರೀತಂಗೌಡ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಹೈಕಮಾಂಡ್ ಸೂಚನೆಯಂತೆ ಹೊಳೆನರಸೀಪುರ ಕ್ಷೇತ್ರಕ್ಕೂ ಸಹ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಾಸಕರ ಆಪ್ತ ಮೂಲಗಳು ಹೇಳಿವೆ.

ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ ದೇವರಾಜೇಗೌಡ ಅವರ ಹೆಸರನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ಪ್ರಕಟಿಸಿತ್ತು. ಆದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ತಂತ್ರಗಳು ದಿಢೀರ್ ಬದಲಾಗಿವೆ.
 
ಚುನಾವಣೆಗೂ ಮುನ್ನ ಸ್ವತಃ ರೇವಣ್ಣ ಹಾಸನಕ್ಕೆ ಬಂದು ಸ್ಪರ್ಧಿಸಿದರೂ ಅವರ ವಿರುದ್ಧ ನಾನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಪ್ರೀತಮ್ ಗೌಡ ಸವಾಲು ಹಾಕಿದ್ದರು.

Latest Indian news

Popular Stories