ಬೆಂಗಳೂರು: ನಿನ್ನೆ ಸೋಮವಾರ ಕೆ ಆರ್ ಪೇಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬರುವಾಗ ತಡವಾಯಿತು. ಅದರಿಂದಾಗಿ ನಿನ್ನೆ ಜೆಡಿಎಸ್ ನ ಸ್ಪರ್ಧಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿಲ್ಲ ಹೊರತು ಬೇರೇನು ಗೊಂದಲಗಳಿಲ್ಲ. ಹಾಸನ ವಿಷಯದಲ್ಲಿಯೂ ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಇಂದು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಅನಿತಾ ಕುಮಾರಸ್ವಾಮಿ ಹೆಸರು ತಂದಿದ್ದಾರೆ. ಭವಾನಿಗೆ ಟಿಕೆಟ್ ಕೊಡುವುದಾದರೆ ನನಗೆ ಕೂಡ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ವರದಿಗಳು ಬರುತ್ತಿವೆ. ನಮ್ಮ ಕುಟುಂಬದಲ್ಲಿ ಅನಿತಾ ಕುಮಾರಸ್ವಾಮಿಯವರನ್ನು ಎರಡು ಮೂರು ಬಾರಿ ಪಕ್ಷದ ಅಭ್ಯರ್ಥಿ ಇಲ್ಲದೇ ಇದ್ದಾಗ ನಿಲ್ಲಿಸಲಾಗಿತ್ತಷ್ಟೆ ಹೊರತು ಅವರಿಗೆ ಆಸಕ್ತಿಯಿರಲಿಲ್ಲ. ಕಾರ್ಯಕರ್ತರು ಮತ್ತು ದೇವೇಗೌಡರ ಸೂಚನೆ ಒತ್ತಡ ಮೇರೆಗೆ ಅನಿತಾ ಚುನಾವಣೆಗೆ ನಿಂತು ಗೆದ್ದರು. ಇನ್ನು ಮುಂದೆ ಅಭ್ಯರ್ಥಿಯಾಗಲು ಅವರಿಗೆ ಒಲವು ಇಲ್ಲ. ಚುನಾವಣಾ ರಾಜಕೀಯದಿಂದ ದೂರವುಳಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಅಭ್ಯರ್ಥಿ ಇಲ್ಲದಿದ್ದಾಗ ಪಕ್ಷದ ಗೌರವ ಉಳಿಸಲು ಕರೆದುಕೊಂಡು ಬಂದು ನಿಲ್ಲಿಸಿದೆವು, ನಾವೇ ಅವರನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿದ್ದೇವೆ ಹೊರತು ಅವರಿಗೆ ಸ್ವಂತ ಆಸಕ್ತಿಯಿರಲಿಲ್ಲ. ಚುನಾವಣಾ ಕಣದಿಂದ ದೂರವುಳಿದು ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಬಿಟ್ಟಿದ್ದಾರೆ. ರಾಜಕೀಯದಿಂದ ದೂರ ಉಳಿದಿದ್ದಾರೆ ಎಂದರು.
ಹಾಸನ ರಾಜಕೀಯ ಬೇರೆ: ಹಾಸನ ಜಿಲ್ಲೆ ರಾಜಕಾರಣ ಬೇರೆ, ನನ್ನ ಹೆಂಡತಿ ರಾಜಕಾರಣ ಬೇರೆ, ಸೊಸೆಯಂದಿರ ಮಧ್ಯೆ ಹೊಡೆದಾಟ ಇಲ್ಲ, ನನ್ನ ಹೆಂಡತಿ ರಾಜಕೀಯಕ್ಕೆ ಬಂದಿದ್ದು ಪಕ್ಷ ಉಳಿಸಲಿಕ್ಕೆ. ಹಾಗಾಗಿ ಆ ಕೆಟಗರಿಕೆ ಇಲ್ಲಿಯದನ್ನು ಸೇರಿಸಬೇಕಾಗಿಲ್ಲ. ಪಕ್ಷ ಉಳಿಸಲು ಕೆಲವು ತೀರ್ಮಾನ ಮಾಡಿದ್ದೇನೆ. ಪಕ್ಷ ಕಟ್ಟಿ ಅದನ್ನು ಉಳಿಸಲು ಪಟ್ಟಿರುವ ಕಷ್ಟ ನನಗೆ ಗೊತ್ತು. ಹಾಗಾಗಿ ನನ್ನ ಕುಟುಂಬವನ್ನು ಅನಿತಾ ಕುಮಾರಸ್ವಾಮಿಯನ್ನು ಮಧ್ಯೆ ತರಬೇಡಿ, ಅವರು ಗೌರವಯುತವಾಗಿ ಕುಟುಂಬದ ಮರ್ಯಾದೆ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.
ಮಂಡ್ಯದಲ್ಲಿ ಷಡ್ಯಂತ್ರ ನಡೆಯುತ್ತಿದೆ: ಮಂಡ್ಯದಲ್ಲಿ ಜೆಡಿಎಸ್ ನ್ನು ಸೋಲಿಸಲು ಕಾಂಗ್ರೆಸ್, ರೈತಸಂಘಗಳು ಒಟ್ಟಾಗುತ್ತಿರುವುದನ್ನು ನೋಡುತ್ತಿದ್ದೀರಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅದನ್ನು ಮಾಡಿದ್ದರು, ಈ ಬಾರಿ ಕೂಡ ಮುಂದುವರಿಸಿದ್ದಾರೆ ಎಂದರು.