ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸ್ಯಾಪ್ ಸ್ಟೇಟಸ್ ವಿರೋಧಿಸಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಕಾರ್ಪೊರೇಟರ್ ಪತಿ ಸೇರಿದಂತೆ ಇದುವರೆಗೆ 88 ಮಂದಿಯನ್ನು ಬಂಧಿಸಲಾಗಿದೆ.
ಹುಬ್ಬಳ್ಳಿ ನಗರದಲ್ಲಿ ಕಾನೂನು-ಸುವ್ಯವಸ್ಥೆ ಮತ್ತು ಭದ್ರತೆ ಸಲುವಾಗಿ ಸೆಕ್ಷನ್ 144 ಮುಂದುವರಿಸಲಾಗಿದೆ. ನಿನ್ನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೈ ಅಲರ್ಟ್ ಆಗಿದ್ದು, 10 ತಂಡಗಳನ್ನು ರಚಿಸಲಾಗಿದೆ, ಹುಬ್ಬಳ್ಳಿ ನಗರ ಸುತ್ತಮುತ್ತ ನಾಕಾಬಂಧಿ ಹಾಕಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.