ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, 5 ಆರೋಪಿಗಳ ಗುರುತು ಪತ್ತೆ

ಹೈದರಾಬಾದ್: ಹೈದರಾಬಾದ್‌ನಲ್ಲಿ ಮರ್ಸಿಡಿಸ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ (ಜೂನ್ 3) ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಐವರು ಆರೋಪಿಗಳ ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಉಪ ಪೊಲೀಸ್ ಆಯುಕ್ತ (ಪಶ್ಚಿಮ ವಲಯ) ಜೋಯಲ್ ಡೇವಿಸ್ ಅವರು, ನಿನ್ನೆ ಓರ್ವ ಆರೋಪಿ ಸದುದ್ದೀನ್ ಮಲಿಕ್ ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿತ್ತು. ಇದೀಗ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಐವರು ಆರೋಪಿಗಳ ಗುರುತಿಸಲಾಗಿದ್ದು, ಐವರಲ್ಲಿ ಮೂವರು ಅಪ್ರಾಪ್ತರಾಗಿದ್ದಾರೆಂದು ಹೇಳಿದ್ದಾರೆ.

ಆರೋಪಿಗಳ ಕುರಿತು ಸಂತ್ರಸ್ತ ಬಾಲಕಿ ಯಾವುದೇ ಮಾಹಿತಿಗಳನ್ನು ನೀಡಿರಲಿಲ್ಲ. ಒಬ್ಬನ ಕುರಿತಷ್ಟೇ ಮಾಹಿತಿ ನೀಡಿದ್ದಳು. ಆತನ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಇದೀಗ ಸಿಸಿಟಿವಿ ದೃಶ್ಯಾವಳಿಗಳಿಂದ ಐವರು ಆರೋಪಿಗಳನ್ನು ಗುರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕನನ್ನು ಗುರುತಿಸಲಾಗಿದ್ದು, ಆತನಿರುವ ಸ್ಥಳವನ್ನು ಪತ್ತೆಹಚ್ಚಲಾಗಿದೆ. ಕಾನೂನಿನ ಪ್ರಕಾರ ಅಪ್ರಾಪ್ತ ವಯಸ್ಕರನ್ನು ರಾತ್ರಿ ಸಮಯದಲ್ಲಿ ಬಂಧಿಸಬಾರದು. ಹೀಗಾಗಿ ಇಂದು ಆತನ ಬಂಧಿಸಲಾಗುತ್ತದೆ ಎಂದಿದ್ದಾರೆ.

ಈ ನಡುವೆ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮ್ಮದ್ ಅಲಿ ಅವರ ಪುತ್ರ ಈ ಘಟನೆಯಲ್ಲಿ ಭಾಗಿಯಾಗಿದ್ದಾನೆಂದು ಕೆಲ ಸುದ್ದಿ ಮಾಧ್ಯಮಗಳು ವರದಿ ಪ್ರಕಟಿಸಿವೆ. ಆದರೆ, ಪೊಲೀಸರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಕಳೆದ ಶನಿವಾರ ಜುಬಲಿ ಹಿಲ್ಸ್‌ನ ರಸ್ತೆ ಸಂಖ್ಯೆ 36ರಲ್ಲಿನ ಪಬ್‌ಗೆ ಬಾಲಕಿ ಸ್ನೇಹಿತರೊಂದಿಗೆ ತೆರಳಿದ್ದರು. ಆಗ ಕೆಲವು ಹುಡುಗರು ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಪಬ್‌ನಿಂದ ಬಂಜಾರಾ ಹಿಲ್ಸ್‌ನ ಬೇಕರಿಯಲ್ಲಿ ಹಲವು ಸಮಯ ಕಳೆದಿದ್ದಾರೆ. ಬಳಿಕ ಬೆಂಜ್ ಮತ್ತು ಇನ್ನೋವಾ ಕಾರಿನಲ್ಲಿ ಏಕಾಂತ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಹುಡುಗರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಪಬ್‌ಗೆ ತಂದು ಬಿಟ್ಟಿದ್ದಾರೆಂದು ಬಾಲಕಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Latest Indian news

Popular Stories