ಐದನೇ ಟಿ-20: ವೆಸ್ಟ್ ಇಂಡೀಸ್ ವಿರುದ್ಧ 88 ರನ್ ಗಳ ಅಂತರದಿಂದ ಗೆದ್ದು, ಸರಣಿ ವಶಕ್ಕೆ ಪಡೆದ ಟೀಂ ಇಂಡಿಯಾ

ಲಾಡರ್ ಹಿಲ್: ಫ್ಲೋರಿಡಾದ ಲಾಡರ್ ಹಿಲ್ ನಲ್ಲಿ ಭಾನುವಾರ ನಡೆದ  ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 88 ರನ್ ಗಳ ಅಂತರದಿಂದ ಗೆದ್ದ ಭಾರತ, 4-1 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು. ಭಾರತ ಪರ ಆರಂಭಿಕ ಆಟಗಾರರಾದ ಇಶಾನ್ ಕಿಶಾನ್ 11 ರನ್ ಗಳಿಗೆ ಪೂರನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಎರಡು ಸಿಕ್ಸರ್ , 8 ಬೌಂಡರಿಗಳೊಂದಿಗೆ 64 ರನ್ ಬಾರಿಸಿದರು. ಇವರಿಗೆ ಜೊತೆಯಾದ ದೀಪಕ್ ಹೂಡಾ 38, ಸಂಜು ಸ್ಯಾಮ್ಸನ್ 15, ನಾಯಕ ಹಾರ್ದಿಕ್ ಪಾಂಡ್ಯ 28, ದಿನೇಶ್ ಕಾರ್ತಿಕ್ 12 ಹಾಗೂ ಅಕ್ಸರ್ ಪಟೇಲ್ 9 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ಪರ ಒಡಿಯನ್ ಸ್ಮಿತ್ 3 ವಿಕೆಟ್ ಪಡೆದರೆ, ಜಾಸನ್ ಹೊಲ್ಡರ್, ಡಾಮಿನಿಕ್ ಡ್ರಾಕ್ಸ್ ,ಹೇಡನ್ ವಾಲ್ಸ್ ತಲಾ ಒಂದೊಂದು ವಿಕೆಟ್ ಪಡೆದರು. ಭಾರತ ತಂಡ ನೀಡಿದ 188 ರನ್ ಗಳ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ 15.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 100 ರನ್ ಗಳಿಸಲಷ್ಟೇ ಶಕ್ತವಾಯಿತು.

ಶಿಮ್ರಾನ್ ಹೆಟ್ಮಿಯರ್ ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲಲಿಲ್ಲ. ಹೆಟ್ಮಿಯರ್ 56 ರನ್ ಗಳಿಸಿದರು. ಇದರಿಂದಾಗಿ ಟೀಂ ಇಂಡಿಯಾ 5 ಪಂದ್ಯಗಳಲ್ಲಿ ಸರಣಿಯಲ್ಲಿ 4-1 ರಲ್ಲಿ ಗೆದ್ದು ಬೀಗುವುದರೊಂದಿಗೆ ಸರಣಿ ವಶಕ್ಕೆ ಪಡೆದುಕೊಂಡಿತು. ಅಕ್ಸರ್ ಪಟೇಲ್ ಪ್ಲೇಯರ್ ಆಫ್ ದಿ ಮ್ಯಾಚ್ ಹಾಗೂ ಅರ್ಷದೀಪ್ ಸಿಂಗ್ ಪ್ಲೇಯರ್ ಆಫ್ ದಿ ಸಿರೀಸ್ ಖ್ಯಾತಿಗೆ ಭಾಜನರಾದರು.

Latest Indian news

Popular Stories