ಕರಾವಳಿಯ ರಕ್ತರಂಜಿತ ಮತೀಯ ರಾಜಕಾರಣ ನಿಭಾಯಿಸಲು ಕಾಂಗ್ರೆಸ್’ನ ಬದ್ದತೆಯ ಕೊರತೆ ಎತ್ತಿ ತೋರಿಸುತ್ತದೆ – ಮುನೀರ್ ಕಾಟಿಪಳ್ಳ

ಮಂಗಳೂರು: ವಿನಾಯಕ ಬಾಳಿಗಾ ಕೊಲೆ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಕೊಲೆಯ ಪ್ರಧಾನ ಆರೋಪಿಯಾಗಿದ್ದ ಇದೇ ನಳಿನ್ ಕುಮಾರ್ ಕಟೀಲ್ ಖಾಸಾ ದೋಸ್ತ್ ನನ್ನು ಅಂದು ಪೊಲೀಸರು ಬಂಧಿಸುವಂತೆ ಮಾಡಲು ಜನಪರ ಸಂಘಟನೆಗಳು ಹರಸಹಾಸ ಪಡಬೇಕಾಗಿ ಬಂದಿತ್ತು. ಅಂದು ಬಾಳಿಗಾ ಹಂತಕರ ಬಂಧನಕ್ಕೆ ನಾವು ಮಾಡಿದ ಹೋರಾಟ ಲೆಕ್ಕ ಇಟ್ಟವರಿಲ್ಲ. ಅಷ್ಟಾಗಿಯೂ ಬಾಳಿಗಾ ಪ್ರಕರಣ ಸಮಗ್ರ ತನಿಖೆ ನಡೆಯಲೇ ಇಲ್ಲ. (ನಡೆದಿದ್ದರೆ ಮತ್ತಷ್ಟು ಖಾಸಾ ದೋಸ್ತ್ ಗಳು ಜೈಲು ಸೇರುತ್ತಿದ್ದರು) ಬಾಳಿಗಾ ಸಹೋದರಿಯರು ಈಗಲೂ SIT ತನಿಖೆಗೆ ಆದೇಶ ನೀಡುವಂತೆ ನ್ಯಾಯಾಲಯದಲ್ಲಿ ಬಡಿದಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಸಿದ್ದರಾಮಯ್ಯ ಸೇರಿದಂತೆ ಅದೇ ಕಾಂಗ್ರೆಸ್ಸಿನ ರಾಜ್ಯ ನಾಯಕರು ಇದೀಗ ವಿರೋಧ ಪಕ್ಷದಲ್ಲಿ ಕೂತು ಕೊಂಡು ಬಾಳಿಗಾ ಕೊಲೆಯ ತನಿಖೆಯ ಕುರಿತು ಮಾತಾಡುತ್ತಿರುವುದು ಕರಾವಳಿಯ ರಕ್ತ ರಂಜಿತ ಮತೀಯ ರಾಜಕಾರಣವನ್ನು ನಿಭಾಯಿಸುವಲ್ಲಿ ಆ ಪಕ್ಷದ ಬದ್ದತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಅಂದು ವಿ‌ನಾಯಕ ಬಾಳಿಗಾ, ಬಂಟ್ವಾಳದ ಹರೀಶ್ ಪೂಜಾರಿ, ಸುರತ್ಕಲ್ ನಲ್ಲಿ ಹಿಂದುತ್ವವಾದಿ ಸಂಘಟನೆಗಳ ಒಳಗಡೆಯ ಗ್ಯಾಂಗ್ ವಾರ್ ಗಳಲ್ಲಿ ನಡೆದ ಕೊಲೆಗಳಿಗೆ ಸಂಬಂಧಿಸಿ ಕಾಂಗ್ರೆಸ್ ಸರಕಾರ ಸರಿಯಾದ ತನಿಖೆ ನಡೆಸಿದ್ದರೆ ಅವಿಭಜಿತ ದಕ್ಷಿಣ ಕ‌ನ್ನಡ ಜಿಲ್ಲೆಯ ರಾಜಕಾರಣ ಬೇರೆಯೇ ದಿಕ್ಕು ಹಿಡಿಯುತ್ತಿತ್ತು. ಇಂದು ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಕೂತು ಹೀಗೆ ಬಾಯಿ ಬಾಯಿ ಬಡಿದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ ಎಂದು‌ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Latest Indian news

Popular Stories