ಕಲುಷಿತ ನೀರು ಕುಡಿದು ಕಲ್ಬುರ್ಗಿಯಲ್ಲಿ ಇಬ್ಬರು ಮೃತ್ಯು – 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಕಲಬುರಗಿ: ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಾಗಿ ಇಬ್ಬರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ನಡೆದಿದೆ.

ದಸ್ತಾಪುರ ಗ್ರಾಮದಲ್ಲಿ 48 ವರ್ಷದ ಕಮಲಾಬಾಯಿ ಕೊಬ್ರೆ ಹಾಗೂ ನಾಗೂರು ಗ್ರಾಮದ 55 ವರ್ಷದ ಮಹಿಳೆ ದ್ರೌಪದಿ ಮೃತಪಟ್ಟ ಮಹಿಳೆಯರಾಗಿದ್ದಾರೆ. ಘಟನೆಯಲ್ಲಿ 39ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆಂದು ತಿಳಿದುಬಂದಿದೆ.

ಕಲುಷಿತ ನೀರು ಸೇವನೆಯಿಂದ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಜನರಲ್ಲಿ ವಾಂತಿ ಬೇಧಿ ಉಲ್ಬಣಗೊಂಡಿದೆ. ಮಕ್ಕಳು, ಮಹಿಳೆಯರು ಸೇರಿ 40ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಇದೀಗ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಘಟನೆ ಬಳಿಕ ಶುದ್ಧ ಕುಡಿಯುವ ನೀರು ನೀಡದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಈ ನಡುವೆ ಘಟನೆ ಸಂಬಂಧ ಹೇಳಿಕೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣ ಬಸಪ್ಪ ಅವರು, ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ 39ಕ್ಕೂ ಹೆಚ್ಚು ಜನರು ಗ್ಯಾಸ್ಟ್ರೋಎಂಟರೈಟಿಸ್‌ನಿಂದ ಬಳಲುತ್ತಿದ್ದಾರೆ, ಇದರಲ್ಲಿ 10 ಜನರು ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಹೇಳಿದ್ದಾರೆ.

Latest Indian news

Popular Stories