ತಮಿಳು ನಾಡು: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ

ಚೆನೈ: ಸೇನೆಯ ಹಿರಿಯ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್ ಎಂಐ-17ವಿ5(Mi-17V5 helicopter) ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಹತ್ತಿರ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.

ಸೂಲೂರಿನ ಭಾರತೀಯ ವಾಯುಪಡೆ ನೆಲೆಯಿಂದ ಸೇನಾ ವಿಮಾನ ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಕಾಲೇಜು(DSC) ಕಡೆಗೆ ಹೊರಟಿತ್ತು.

ದಟ್ಟ ಮಂಜು ಕವಿದ ವಾತಾವರಣ ನಡುವೆ ನಂಜಪ್ಪಂಚತಿರಂ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸಂಭವನೀಯ ಸಾವು ನೋವುಗಳು ಅಥವಾ ಗಾಯಗಳ ಬಗ್ಗೆ ತಕ್ಷಣದ ಮಾಹಿತಿ ಇಲ್ಲ.

ತನಿಖೆಗೆ ಆದೇಶ: ತಮಿಳು ನಾಡಿನ ಕೂನೂರು ಬಳಿ ಎಂಐ-17ವಿ5 ಹೆಲಿಕಾಪ್ಟರ್( Mi-17V5 helicopter) ಪತನಕ್ಕೀಡಾಗಿರುವ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್, ಅವರ ಕುಟುಂಬ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ.

ನಾಲ್ವರು ಸಾವಿಗೀಡಾಗಿರುವ ಶಂಕೆ: ನೀಲಗಿರಿ ಅರಣ್ಯ ಪ್ರದೇಶದಲ್ಲಿ ಪತಕ್ಕೀಡಾದ ವೇಳೆ ಸೇನಾ ಹೆಲಿಕಾಪ್ಟರ್ ನಲ್ಲಿದ್ದ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದ್ದು, ಹೆಲಿಕಾಪ್ಟರ್ ನಲ್ಲಿ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಘಟನೆಯ ವಿವರ ನೀಡಿದ್ದಾರೆ.

Latest Indian news

Popular Stories