‘ತಾಂಟುವವರ’ ಹುಟ್ಟಡಗಿಸಿದ ಪೋಲಿಸ್ ಇಲಾಖೆ; ಪಿಎಫ್ಐ, ಎಸ್ಡಿಪಿಐಗೆ ಮರ್ಮಾಘಾತ ನೀಡಿದ ಎನ್ಐಎ ಐತಿಹಾಸಿಕ ದಾಳಿ‌ ಶ್ಲಾಘನೀಯ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ (ದಿ ಹಿಂದುಸ್ತಾನ್ ಗಝೆಟ್)

ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೇಶದ 10 ರಾಜ್ಯಗಳಲ್ಲಿ ಐತಿಹಾಸಿಕ ಮಿಂಚಿನ ದಾಳಿ ನಡೆಸಿ ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ 100ಕ್ಕೂ ಹೆಚ್ಚು ಪಿಎಫ್ಐ ನಾಯಕರನ್ನು ಬಂದಿಸಿರುವ ದಿಟ್ಟ ಕ್ರಮ ಹಾಗೂ ದಾಳಿಯನ್ನು ವಿರೋಧಿಸಿ ಉಡುಪಿ ಜಿಲ್ಲೆಯ ಕಾಪು ಮತ್ತು ಉಡುಪಿ ನಗರದಲ್ಲಿ ‘ತಾಂಟುವ’ ಮನಸ್ಥಿತಿಯನ್ನು ಹೊಂದಿರುವ ಕಿಡಿಗೇಡಿಗಳ ರಸ್ತೆ ತಡೆಯನ್ನು ವಿಫಲಗೊಳಿಸಿ‌ ಮತಾಂಧ ಸಮಾಜಘಾತುಕ‌ ದುಷ್ಟ ಶಕ್ತಿಗಳ‌ ಹುಟ್ಟಡಗಿಸಿರುವ ಜಿಲ್ಲಾ ಪೋಲಿಸ್ ಇಲಾಖೆಯ ಕ್ರಮ ಶ್ಲಾಘನೀಯ ಎಂದು‌ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ‌ ಹಿಂದೂ‌ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಆಮೂಲಾಗ್ರ ತನಿಖೆ ಹಾಗೂ ಇನ್ನಿತರ ಮಹತ್ತರ ವಿಚಾರಗಳ ಹಿನ್ನೆಲೆಯಲ್ಲಿ‌ ಮುಸ್ಲಿಂ ತೀವ್ರವಾದ ಸಂಘಟನೆಗಳಾದ‌ ಪಿಎಫ್ಐ ಮತ್ತು ಎಸ್ಡಿಪಿಐ ಚಟುವಟಿಕೆಗಳ‌ ಮೇಲೆ ತೀವ್ರ ನಿಗಾ ವಹಿಸಿರುವ ಎನ್ಐಎ ಯೋಜನಾಬದ್ಧವಾಗಿ ಈ ದಾಳಿಯನ್ನು ನಡೆಸಿದ್ದು ಇಂತಹ ದೇಶ ವಿರೋಧಿ ಸಂಘಟನೆಗಳನ್ನು ಬೇರು ಸಹಿತ ಕಿತ್ತುಹಾಕಲು ಕೇಂದ್ರ ಗೃಹ ಇಲಾಖೆ ದೊಡ್ಡ ಮಟ್ಟದ ಯೋಜನೆ ರೂಪಿಸಿದ್ದು, ಈ ಪ್ರಕ್ರಿಯೆ ಕೇವಲ‌ ಮುಸ್ಲಿಂ ಮೂಲಭೂತವಾದಿ ಸಂಘಟನೆಯ ನಿಷೇಧಕ್ಕೆ ಮಾತ್ರ ಸೀಮಿತವಾಗಿರದೆ ಅದರ ಹಣಕಾಸು ವ್ಯವಹಾರ ಹಾಗೂ ಅಸ್ತಿತ್ವಕ್ಕೆ ಧಕ್ಕೆ ತರುವ ಎಲ್ಲಾ ಅಗತ್ಯ ಕ್ರಮಗಳನ್ನು‌ ಕಾರ್ಯಗತಗೊಳಿಸಲಿದೆ.

ದೇಶದ ಸ್ವಾತಂತ್ರ್ಯದ ಸಂದರ್ಭದಲ್ಲೇ ಧರ್ಮಾಧಾರಿತವಾಗಿ ದೇಶ ವಿಭಜನೆಗೈದ ಕಾಂಗ್ರೆಸ್ ಇಂದು ದೇಶದೆಲ್ಲೆಡೆ ನಡೆಯುತ್ತಿರುವ ಹಲವಾರು ಅನಪೇಕ್ಷಿತ ಘಟನೆಗಳಿಗೆ ನಾಂದಿ ಹಾಡಿರುವುದು ವಾಸ್ತವ. ಪ್ರಸಕ್ತ ದೇಶದಾದ್ಯಂತ ಯಾವುದೇ ರಾಷ್ಟ್ರ ವಿರೋಧಿ ಮತಾಂಧ ಸಂಘಟನೆಗಳು ಹದ್ದು ಮೀರಿ ವರ್ತಿಸಿದಲ್ಲಿ ತಕ್ಕ ಶಾಸ್ತಿ ನೀಡಲು‌ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸದೃಢ ಆಡಳಿತ ವ್ಯವಸ್ಥೆ ಸರ್ವ ಸನ್ನದ್ಧವಾಗಿದೆ ಎಂಬುದು ಎನ್ಐಎ ದಾಳಿ ಹಾಗೂ ಪಿಎಫ್ಐ ನಾಯಕರ ಬಂಧನದಿಂದ ರುಜುವಾತಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories