ತಾಲಿಬಾನ್-ಚೀನಾ-ಪಾಕಿಸ್ತಾನ ಮೈತ್ರಿ ಕುರಿತು ಆತಂಕ ವ್ಯಕ್ತಪಡಿಸಿದ ಮೋಹನ್ ಭಾಗವತ್

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ವಿಜಯದಶಮಿ ಉತ್ಸವ ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ಅಫ್ಘಾನಿಸ್ತಾನ, ತಾಲೀಬಾನ್, ಚೀನಾ-ಪಾಕಿಸ್ತಾನದ ಮೈತ್ರಿಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಗಡಿಯಲ್ಲಿ ನಮ್ಮ ಸೇನಾ ಸನ್ನದ್ಧತೆ ಬಲಿಷ್ಠವಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಮೋಹನ್ ಭಾಗ್ವತ್, ” ತಾಲೀಬಾನ್ ಇತಿಹಾಸ ನಮ್ಮೆಲ್ಲರಿಗೂ ತಿಳಿದಿದೆ. ಇಂದಿಗೂ ಚೀನಾ, ಪಾಕಿಸ್ತಾನ ತಾಲೀಬಾನ್ ನ್ನು ಬೆಂಬಲಿಸುತ್ತಿದೆ. ತಾಲೀಬಾನ್ ಒಂದು ವೇಳೆ ಬದಲಾಗಿದ್ದರೂ, ಪಾಕಿಸ್ತಾನ ಬದಲಾಗಿಲ್ಲ. ಭಾರತದೆಡೆಗೆ ಚೀನಾದ ಉದ್ದೇಶ ಬದಲಾಗಿದೆಯೇ? ಈ ಹಿನ್ನೆಲೆಯಲ್ಲಿ, ಮಾತುಕತೆ ನಡೆಯುವಾಗ ನಾವು ಎಚ್ಚರಿಕೆ, ಜಾಗ್ರತೆ, ಸನ್ನದ್ಧತೆಯಿಂದ ಇರಬೇಕು ಎಂದು ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ.

” ಇಸ್ಲಾಮ್ ಹೆಸರಿನಲ್ಲಿ ಅವರ ಪ್ರವೃತ್ತಿ – ಭಾವೋದ್ರಿಕ್ತ ಮತಾಂಧತೆ, ದೌರ್ಜನ್ಯ ಮತ್ತು ಭಯೋತ್ಪಾದನೆ ತಾಲೀಬಾನ್ ಬಗ್ಗೆ ಆತಂಕಗೊಳ್ಳುವಂತೆ ಮಾಡುತ್ತವೆ. ಆದರೆ ಚೀನಾ-ಪಾಕಿಸ್ತಾನ ಹಾಗೂ ಟರ್ಕಿಗಳು ಕೃತ್ರಿಮ ಕೂಟ ರಚಿಸಿದ್ದು, ತಾಲೀಬಾನ್ ನೊಂದಿಗೆ ಕೈ ಜೋಡಿಸಿವೆ. ಅಬ್ದಾಲಿ (ಆಧುನಿಕ ಕಾಲದ ಅಫ್ಘಾನಿಸ್ತಾನದ ಸ್ಥಾಪಕ ಹಾಗೂ ದುರಾನಿ ಸಾಮ್ರಾಜ್ಯದ ಸ್ಥಾಪಕ) ನ ಕಾಲದಿಂದಲೂ ವಾಯುವ್ಯ ಗಡಿಗಳ ಭದ್ರತೆ ಗಂಭೀರ ಕಾಳಜಿಯ ವಿಷಯವಾಗಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥರು ಹೇಳಿದ್ದಾರೆ.

ಕೇವಲ ಭೂಗಡಿಗಳಲ್ಲಷ್ಟೇ ಅಲ್ಲದೇ ಜಲಗಡಿಗಳಲ್ಲೂ ಸಹ ಗಡಿ ಭದ್ರತೆಯನ್ನು ಹೆಚ್ಚಿಸಬೇಕು, ಜಲಗಡಿಗಳಲ್ಲಿ ಸದ್ದಿಲ್ಲದೇ ದಾಳಿಗಳು ನಡೆಯುತ್ತಿರುತ್ತವೆ. ಗಡಿ ಭಾಗಗಳಲ್ಲಿನ ಅಕ್ರಮ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕಿದೆ ಹಾಗೂ ಈ ರೀತಿ ಒಳನುಸುಳಿದವರನ್ನು ರಾಷ್ಟ್ರೀಯ ನಾಗರಿಕ ಪಟ್ಟಿಯನ್ನು ಮಾಡುವ ಮೂಲಕ ಗುರುತಿಸಿ ಅಂತಹವರಿಗೆ ನಾಗರಿಕ ಹಕ್ಕುಗಳನ್ನು ನಿರಾಕರಿಸಬೇಕೆಂದು ಮೋಹನ್ ಭಾಗ್ವತ್ ಸಲಹೆ ನೀಡಿದ್ದಾರೆ.

Latest Indian news

Popular Stories