ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಸರಕಾರದಿಂದ ವಿದ್ಯುತ್ ದರ ಏರಿಕೆಯ ಶಾಕ್; ದರ ಏರಿಕೆ ಹಿಂಪಡೆದು ಜನಪರ ನಿಲುವು ತಾಳಿ – ರಮೇಶ್ ಕಾಂಚನ್

ಉಡುಪಿ: ನವರಾತ್ರಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ಸರಕಾರ ಕರೆಂಟ್ ಶಾಕ್ ಬಿಸಿ ಮುಟ್ಟಿಸಿದೆ. ಈಗಾಗಲೇ ದಿನ ನಿತ್ಯ ಬಳಕೆಯ ವಸ್ತುಗಳ ಏರಿಕೆಯಿಂದ ಕಂಗೆಟ್ಟಿದ್ದ ಸಾಮಾನ್ಯ ಜನರಿಗೆ ಸರಕಾರ ಏಕಾಏಕೀ ವಿದ್ಯುತ್ ದರ ಏರಿಸಿ ಗಾಯದ ಮೇಲೆ ಬರೆ ಏಳೆದಿದೆ. ಅಕ್ಟೋಬರ್ 1 ರಿಂದಲೇ ಗ್ರಾಹಕರಿಗೆ ಶುಲ್ಕದ ಹೊರೆ ಬೀಳಲಿದೆ. ಕಳೆದ ಏಪ್ರಿಲ್‍ನಲ್ಲಿ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂ ನಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದರೂ ಇದೀಗ ಮತ್ತೊಮ್ಮೆ ದರ ಏರಿಸಿದರುವುದು ಖೇದಕರವರೆಂದು ಕಾಂಗ್ರೆಸ್ ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಈಗ ಅಕ್ಟೋಬರ್‍ನಲ್ಲಿ ಇಂಧನ ವೆಚ್ಚ ಶುಲ್ಕದ ಬಿಸಿ ಗ್ರಾಹಕರಿಗೆ ಮುಟ್ಟಲಿದ್ದು, ಪ್ರತಿ ಯೂನಿಟ್ ಮೇಲೆ 43 ಪೈಸೆ ದರ ಏರಿಕೆಯಾಗಲಿದೆ. ಮುಂದಿನ ವರ್ಷ ಮಾರ್ಚ್‍ವರೆಗೆ ಈ ದರ ಇರಲಿದೆ. ಈಗಾಗಲೇ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ.ವಿದ್ಯುತ್ ಉತ್ಪಾದನೆ ಉತ್ತಮವಾಗಿದೆ. ಅದರ ಹೊರತಾಗಿಯೂ ವಿದ್ಯುತ್ ಖರೀದಿಗೆ 1244 ಕೋಟಿ ಹೆಚ್ಚಳವಾಗಿದೆ ಎಂಬುವುದು ಅಚ್ಚರಿಯ ಸಂಗತಿ.

ನಮ್ಮ ಉಡುಪಿ ಜಿಲ್ಲೆಯವರೇ ಆದ ಸುನೀಲ್ ಕುಮಾರ್ ಅವರು ಇಂಧನ ಖಾತೆಯ ಸಚಿವರಾಗಿದ್ದಾರೆ. ವಿದ್ಯುತ್ ದರ ಏರಿಸುವ ಬದಲು ಜನಪರ ನಿಲುವು ತಾಳಿ ವಿದ್ಯುತ್ ದರವನ್ನು ತಕ್ಷಣ ಹಿಂಪಡೆಯಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

Latest Indian news

Popular Stories