ನನ್ನ ನೇಮಕಕ್ಕೂ ಇಬ್ರಾಹಿಂ ಅಸಮಾಧಾನಕ್ಕೂ ಸಂಬಂಧವಿಲ್ಲ: ಯುಟಿ ಖಾದರ್

ಮಂಗಳೂರು: ನನ್ನನ್ನು ವಿಧಾನಸಭೆಯ ಉಪನಾಯಕನನ್ನಾಗಿ ಮಾಡಿದ್ದಕ್ಕೂ ಸಿಎಂ ಇಬ್ರಾಹಿಂ ಅಸಮಾಧಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವಿಧಾನಸಭೆಯ ಉಪನಾಯಕ, ಶಾಸಕ ಯು.ಟಿ.ಖಾದರ್ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ‌.ಇಬ್ರಾಹೀಂರನ್ನು ಹಿಂದೆಯೂ ಪಕ್ಷ ಗುರುತಿಸಿದೆ. ಮುಂದೆಯೂ ಗುರುತಿಸಲಿದೆ. ಪಕ್ಷ ಎಂದಿಗೂ ಅಂಬೇಡ್ಕರ್ ಅವರ ಸಂವಿಧಾನ, ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತಗಳ ಆಧಾರದಲ್ಲಿ ಕಾರ್ಯಾಚರಿಸುತ್ತದೆ. ವಿಧಾನಸಭೆ ಉಪನಾಯಕನಾಗಿ ನನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಇದು ಸ್ಥಾನ ಮಾನಕ್ಕಿಂತಲೂ ಹೆಚ್ಚಿನ ಜವಾಬ್ದಾರಿ. ಸರಕಾರದ ವೈಫಲ್ಯಗಳನ್ನು ಇನ್ನಷ್ಟು ಸಮರ್ಥವಾಗಿ ಬಿಂಬಿಸಿ ಹೋರಾಟ ಮಾಡುವ ಜವಾಬ್ದಾರಿ ಎಂದು ಹೇಳಿದರು.

ಇದೇ ವೇಳೆ ಅಲ್ಪ ಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಬದಿಗೊತ್ತುತ್ತಿದೆ ಎಂಬ ಆರೋಪಗಳನ್ನು ನಿರಾಕರಿಸಿದ ಅವರು, ಎಸ್ಎಂ ಕೃಷ್ಣಾ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ 5-7 ಸಚಿವರು ಮುಸ್ಲಿಂ ಸಮುದಾಯದವರಾಗಿದ್ದರು. ಹೀಗಿರುವಾಗ ಇಲ್ಲಿ ತಾರತಮ್ಯ ಇಲ್ಲಿದೆ? ಒಂದೇ ಬಾರಿ ಎಲ್ಲವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತೀಯೊಬ್ಬರೂ ಸಂವಿಧಾನದ ತತ್ತ್ವಗಳನ್ನು ಅನುಸರಿಸುವಂತೆ ಮಾಡುತ್ತಿರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದು ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ಉಪನಾಯಕನಾಗಿ ಆಯ್ಕೆಯಾಗುತ್ತಿದ್ದಂತೆಯೇ ನಾನು ಸಿಎಂ ಇಬ್ರಾಹಿಂ ಹಾಗೂ ಪಕ್ಷದ ನಾಯಕರಾದ ತನ್ವೀರ್ ಸೇಠ್, ಜಮೀರ್ ಅಹ್ಮದ್ ಖಾನ್ ಜೊತೆಗೆ ಮಾತುಕತೆ ನಡೆಸಿದೆ. ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ನಾನು ಕೆಲಸ ಮಾಡುತ್ತೇನೆಂದಿದ್ದಾರೆ.

Latest Indian news

Popular Stories