ನಿರ್ಲಕ್ಷ್ಯ: ಬರೊಬ್ಬರಿ ಒಂದು ವರ್ಷ ಮೂರು ತಿಂಗಳ ನಂತರ ಕೋವಿಡ್ ರೋಗಿಗಳ ಕೊಳೆತ ಶವ ಪತ್ತೆ

ಬೆಂಗಳೂರು: ಕೋವಿಡ್​ನಿಂದ ಮೃತಪಟ್ಟಿದ್ದ ಇಬ್ಬರ ಮೃತದೇಹಗಳು ಬರೋಬ್ಬರಿ 1 ವರ್ಷ ಮೂರು ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೆಚ್ಚಿಬೀಳಿಸುವ ಘಟನೆಯೊಂದು ರಾಜಾಜಿನಗರದ ಇಎಸ್​ಐ ಆಸ್ಪತ್ರೆಯ ಶವಾಗಾರದಲ್ಲಿ ನಡೆದಿದೆ.

ಜುಲೈ 2020ರಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದ ಇಬ್ಬರ ಮೃತದೇಹಗಳು 1 ವರ್ಷ ಮೂರು ತಿಂಗಳ ಕಾಲ ರಾಜಾಜಿನಗರ ಇಎಸ್​ಐ ಆಸ್ಪತ್ರೆಯ ಶವಾಗಾರದಲ್ಲೇ ಉಳಿದ ಆಘಾತಕಾರಿ ಘಟನೆ ನಡೆದಿದೆ.

ಶವಾಗಾರವನ್ನು ಸ್ವಚ್ಛಗೊಳಿಸಲು ಹೋದಾಗ ಶೈತ್ಯಾಗಾರದಲ್ಲೇ ಎರಡು ಮೃತದೇಹಗಳು ಕೊಳೆತು ನಾರುತ್ತಿದ್ದವು. ಮೃತದೇಹಗಳಿಗೆ ಹಾಕಿದ್ದ ಬಿಬಿಎಂಪಿ ಟ್ಯಾಗ್‌ನಿಂದಾಗಿ ಮೃತದೇಹಗಳು ಚಾಮರಾಜಪೇಟೆಯ ದುರ್ಗಾ (40) ಮತ್ತು ಕೆ.ಪಿ ಅಗ್ರಹಾರದ ಮುನಿರಾಜು(35) ಅವರದ್ದು ಎಂದು ತಿಳಿದು ಬಂದಿದೆ.

ಈ ಘಟನೆಗೆ ಇಎಸ್​ಐ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಮತ್ತು ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ಮೃತದೇಹಗಳನ್ನು ಅಂತ್ಯಕ್ರಿಯೆಗೆ ಬಿಬಿಎಂಪಿಗೆ ಒಪ್ಪಿಸಲು ಇಎಸ್​ಐ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಮೊದಲ ಅಲೆಯಲ್ಲಿ ಬಿಬಿಎಂಪಿಯೇ ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದ ಕಾರಣ ಮೃತರ ಕುಟುಂಬದ ಸದಸ್ಯರು ಸಹ ಆಸ್ಪತ್ರೆಯ ಕಡೆ ಸುಳಿದಿರಲಿಲ್ಲ. ಆದರೆ ಆಸ್ಪತ್ರೆ ಹಾಗೂ ಬಿಬಿಎಂಪಿ ನಡುವೆ ಆದ ಸಂವಹನ ಕೊರತೆಯಿಂದ ಈ ಎರಡು ಮೃತದೇಹಗಳು ಶವಾಗಾರದಲ್ಲೇ ಉಳಿದಿವೆ ಎಂದು ತಿಳಿದುಬಂದಿದೆ.

Latest Indian news

Popular Stories