ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಶ್ರೀಲಂಕಾ ಪರಿಸ್ಥಿತಿ ನಮಗೂ ಎದುರಾಗಲಿದೆ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಶ್ರೀಲಂಕಾದಲ್ಲಿ ಆರ್ಥಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಅಲ್ಲೀಗ ಆಹಾರಕ್ಕಾಗಿ ಹಾಹಾಕಾರ ಎದ್ದಿದೆ. ಬಿಜೆಪಿ ಮುಂದಿನ 5-10 ವರ್ಷಗಳ ಕಾಲ ಅಧಿಕಾರದಲ್ಲಿದ್ದೇ ಆದರೆ, ನಮಗೂ ಶ್ರೀಲಂಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಮಂಗಳವಾರ ಹೇಳಿದ್ದಾರೆ.

ರೈತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸ್ವಂತವಾಗಿ ಸರ್ಕಾರ ರಚಿಸಲು ಅವಕಾಶವನ್ನು ಕೋರಿದ್ದಾರೆ. ಅಲ್ಲದೆ, ಪರಿಸ್ಥಿತಿ ಎದುರಾದರೆ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲು ಜೆಡಿಎಸ್ ಸಿದ್ಧವಿದೆ ಎಂದು ಹೇಳಿದ್ದಾರೆ.

ಮುಂದಿನ 10 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿ ಮುಂದುವರೆದಿದ್ದೇ ಆದರೆ, ಶ್ರೀಲಂಕಾ ಇಂದು ಎದುರಿಸುತ್ತಿರುವ ಪರಿಸ್ಥಿತಿ ಭಾರತಕ್ಕೂ ಎದುರಾಗಲಿದೆ. ಇತಿಹಾಸದಲ್ಲಿಯಂ ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯನ್ನು ಶ್ರೀಲಂಕಾ ಎದುರಿಸುತ್ತಿದೆ. ಪ್ರಸ್ತುತ ಪರಿಸ್ಥಿತಿ ಅರಿವು ಜನರಿಗೆ ಆಗದೇ ಹೋದರೆ, ನಾವೂ ಕೂಡ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ಹಾಗೂ ಹಲವು ಗಂಟೆಗಳ ಕಾಲ ವಿದ್ಯುತ್ ಕಡಿತದಿಂದ ಅಲ್ಲಿನ ಸಾರ್ವಜನಿಕರು ತಿಂಗಳುಗಟ್ಟಲೆ ಪರದಾಡುತ್ತಿದ್ದಾರೆ. ರಾಜ್ಯದ ಬಗ್ಗೆ ಬದ್ಧತೆ ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಆಗಿದ್ದು, ಕರ್ನಾಟಕದಲ್ಲಿ ಆಡಳಿತ ನಡೆಸಲು ಜೆಡಿಎಸ್’ಗೆ ಜನರು ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.

ಈಗಾಗಲೇ ರಾಜ್ಯದಲ್ಲಿ ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೇನೆ. ಕ್ಯಾಬಿನೆಟ್ ಹಾಲ್ ನಲ್ಲಿ ನನ್ನ ಫೋಟೋ ಇದೆ. ನನ್ನ ಸ್ನೇಹಿತರು ಮತ್ತು ಬೆಂಬಲಿಗರು ಕುಮಾರಣ್ಣ ಮೂರನೇ ಬಾರಿ ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗುವುದು ನನಗೆ ಬೇಡ. ಆದರೆ, ಸಂಕಷ್ಟದಲ್ಲಿರುವ ರೈತರ ಸೇವೆ ಮಾಡಲು ನಾನು ಬಯಸುತ್ತಿದ್ದೇನೆ. ರೈತ ಮುಖಂಡರು ರಾಜಕೀಯಕ್ಕೆ ಸೇರ್ಪಡೆಗೊಳ್ಳಬೇಕು. ನೀವು ಸಿದ್ಧ ಎಂದು ಹೇಳುವುದಾದರೆ ಕನಿಷ್ಠ 10 ವಿಧಾನಸಭಾ ಕ್ಷೇತ್ರಗಳಿಗೆ ನಿಮ್ಮನ್ನು ಅಭ್ಯರ್ಥಿಗಳನ್ನಾಗಿ ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ.

Latest Indian news

Popular Stories