ಬೀದರ್: ಮಹಿಳೆಯ ಸಾವಿಗೆ ಕಾರಣವಾದ ಮೂವರು ವೈದ್ಯರಿಗೆ ಜೈಲು ಶಿಕ್ಷೆ

ಬೀದರ್: ವೆಂಟಿಲೇಟರ್ ಇಲ್ಲದೆ ಗರ್ಭಕೋಶದ ಶಸ್ತ್ರ ಚಿಕಿತ್ಸೆ ಮಾಡಿ, ಮಹಿಳೆಯ ಸಾವಿಗೆ ಕಾರಣರಾದ
ಮೂವರು ವೈದ್ಯರು ಸೇರಿದಂತೆ ನಾಲ್ವರಿಗೆ ಸ್ಥಳೀಯ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

ಖ್ಯಾತ ವೈದ್ಯರಾದ ಡಾ. ರಾಜ್ ಶ್ರೀ ಬಿರಾದಾರ್ ಮತ್ತು ಡಾ. ವೈಜಯಂತಿ ಬೀರಾದಾರ್ ಮತ್ತು ಸಾಯಿಬಣ್ಣ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಜೆಎಂಎಫ್ ಸಿ ಕೋರ್ಟ್ ನ್ಯಾಯಾಧೀಶ ಅಬ್ದುಲ್ ಖಾದರ್ ತೀರ್ಪು ಪ್ರಕಟಿಸಿದ್ದಾರೆ. ಒಂದು ವೇಳೆ ಅವರು ದಂಡ ಪಾವತಿಸುವಲ್ಲಿ ವಿಫಲರಾದರೆ ಮತ್ತೆ ಆರು ತಿಂಗಳ ಕಾಲ ಕಾರಾಗೃಹ ಶಿಕ್ಷೆಯನ್ನು ವಿಸ್ತರಿಸಲಾಗಿದೆ.

ರಾಜಶೇಖರ್ ಪಾಟೀಲ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ಪಾವತಿಸಲು ಆದೇಶಿಸಲಾಗಿದೆ. ತಪ್ಪಿದಲ್ಲಿ ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

2014, ಅಕ್ಟೋಬರ್ ನಲ್ಲಿ ಘಾಳೆಪ್ಪ ಔರಾದ್ ಕಾರ್ ಅವರ ಪತ್ನಿ ಸಂಪಾವತಿ ಅವರನ್ನು ನಗರದ ಡಾ. ಬಿರಾದಾರ್ ಶುಶ್ರೂತ ನರ್ಸಿಂಗ್ ಹೋಮ್ ನಲ್ಲಿ ಗರ್ಭಕೋಶದ ಚಿಕಿತ್ಸೆಗಾಗಿ ದಾಖಲಾಗಿತ್ತು. ಆದರೆ, ಐದು ಗಂಟೆಗಳ ಶಸ್ತ್ರ ಚಿಕಿತ್ಸೆ ಬಳಿಕ ಅವರು
ವೈದ್ಯಕೀಯ ನಿರ್ಲಕ್ಷತೆಯಿಂದಾಗಿ ಸಾವನ್ನಪ್ಪಿದ್ದರು. ಆದಾಗ್ಯೂ, ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡದೆ ಆಂಬ್ಯುಲೆನ್ಸ್ ವೊಂದರಲ್ಲಿ ಡಾ. ರಾಜಶೇಖರ್ ಪಾಟೀಲ್ ಅವರ ಶ್ರೀ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಡಾ. ರಾಜಶೇಖರ್ ಪಾಟೀಲ್ ಕೂಡಾ ಸಂಪಾವತಿ ಮೃತಪಟ್ಟಿರುವ ವಿಷಯವನ್ನು ಮುಚ್ಚಿಟ್ಟು, ಚಿಕಿತ್ಸೆ ಮುಂದುವರೆಸಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿತ್ತು.

ತದನಂತರ, ವೆಂಟಿಲೇಟರ್ ಸೌಲಭ್ಯವಿಲ್ಲದೆ ಶುಶ್ರೂತ ನರ್ಸಿಂಗ್ ಹೋಮ್ ನಲ್ಲಿಯೇ ಮೃತಪಟ್ಟಿರುವುದು ತಿಳಿದುಬಂದಿತ್ತು. ಇಂತಹ ಅಪಾಯಕಾರಿ ಪ್ರಕ್ರಿಯೆಗೆ ವೆಂಟಿಲೇಟರ್ ಸೌಲಭ್ಯವಿಲ್ಲದೇ ನರ್ಸಿಂಗ್ ಹೋಮ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ . ಅಲ್ಲದೇ, ಅವಳು ಸಾವನ್ನಪ್ಪಿದ್ದರೂ, ಡಾ ರಾಜಶೇಖರ್ ಪಾಟೀಲ್, ಇತರ ಇಬ್ಬರು ವೈದ್ಯರೊಂದಿಗೆ ಚಿಕಿತ್ಸೆ ಮುಂದುವರೆಸಿದ್ದರು ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಶರಣಗೌಡ ಹಾಗೂ ಸಹಾಯಕ ಸರಕಾರಿ ಅಭಿಯೋಜಕ ಸುನೀಲ್ ಕಾಂಬಳೆ ವಾದ ಮಂಡಿಸಿದ್ದರು.

Latest Indian news

Popular Stories