ಎರಡು ವಿಮಾನಗಳ ನಡುವಿನ ದುರಂತ ತಪ್ಪಿ 426 ಮಂದಿ ಸೇಫ್ – ಏನಿದು ಪ್ರಕರಣ?

ಬೆಂಗಳೂರು: ನಗರದಲ್ಲಿ ಎರಡು ವಿಮಾನಗಳ ನಡುವೆ ಸಂಭವಿಸಲಿದ್ದ ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿರುವ ಕುರಿತು ವರದಿಯಾಗಿದೆ.

ಜ.7ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮಾನಾಂತರ ರನ್‌ವೇಗಳಿಂದ ಒಂದೇ ದಿಕ್ಕಿನಲ್ಲಿ ವಿಮಾನಗಳು ಟೇಕ್ ಆಫ್ ಮಾಡಲು ಅನುವು ಮಾಡಲಾಗಿದೆ. ಇದರಿಂದ ಇಂಡಿಗೋ ಎರಡು ವಿಮಾನಗಳ ನಡುವೆ ಸಂಭವಿಸಬೇಕಿದ್ದ ಭಾರೀ ಅನಾಹುತವು ರೇಡಾರ್ ನೀಡಿದ ಎಚ್ಚರಿಕೆಯಿಂದ ತಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ 6ಇ 455 ಮತ್ತು ಬೆಂಗಳೂರಿನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ 6ಇ 246 ಎಂಬ ಎರಡು ಇಂಡಿಗೋ ವಿಮಾನಗಳು ಭಾರೀ ದುರಂತದ ಅಂಚಿನಲ್ಲಿದ್ದವು ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉತ್ತರ ಮತ್ತು ದಕ್ಷಿಣ ರನ್‌ವೇಗಳಿವೆ. ರನ್‌ವೇಗಳಲ್ಲಿ ಒಂದೇ ಸಮಯದಲ್ಲಿ ಎರಡೂ ಕಡೆ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ಅನುಮತಿ ಇಲ್ಲ. ಎರಡು ರನ್‌ವೇಯಲ್ಲಿ ಸಮಾನಂತರವಾಗಿ ಲ್ಯಾಂಡಿಂಗ್‌, ಟೇಕಾಫ್ ಮಾಡುವುದಿದ್ದರೆ ಕೆಲ ಸಮಯದ ಅಂತರವನ್ನು ನೋಡಿ ಅನುಮತಿ ನೀಡಬೇಕಾಗುತ್ತದೆ.

ಜ.7 ರಂದು ಉತ್ತರ ರನ್‌ವೇ ಟೇಕಾಫ್, ದಕ್ಷಿಣ ರನ್‌ವೇ ಲ್ಯಾಂಡಿಂಗ್‌ಗೆ ಬಳಸಲಾಗುತ್ತಿತ್ತು. ಈ ಸಮಯದಲ್ಲಿ ಶಿಫ್ಟ್ ಇನ್‌ಚಾರ್ಜ್ ಉತ್ತರ ರನ್‌ವೇಯಲ್ಲಿ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದರು. ಈ ವೇಳೆ ದಕ್ಷಿಣ ರನ್‌ವೇಯನ್ನು ಕಾರ್ಯಾಚರಣೆಗೆ ಬಂದ್ ಮಾಡಬೇಕಿತ್ತು. ಆದರೆ ಈ ವಿಚಾರವನ್ನು ದಕ್ಷಿಣ ರನ್‌ವೇ ನಿಯಂತ್ರಿಸುತ್ತಿದ್ದ ಟವರ್ ನಿಯಂತ್ರಕರಿಗೆ ತಿಳಿಸಿರಲಿಲ್ಲ.

ಈ ವಿಚಾರ ತಿಳಿಸದೇ ಇದ್ದ ಕಾರಣ ಕೋಲ್ಕತ್ತಾಗೆ ತೆರಳಲು ಸಿದ್ಧವಾಗಿದ್ದ ವಿಮಾನದ ಹಾರಾಟಕ್ಕೆ ಟವರ್ ನಿಯಂತ್ರಕರು ಅನುಮತಿ ನೀಡಿದ್ದಾರೆ. ಈ ಸಮಯದಲ್ಲೇ ಉತ್ತರ ಟವರ್ ನಿಯಂತ್ರಕರು ಭುವನೇಶ್ವರಕ್ಕೆ ತೆರಳುತ್ತಿದ್ದ ವಿಮಾನದ ಟೇಕಾಫ್‌ಗೆ ಅನುಮತಿ ನೀಡಿದ್ದಾರೆ. ಇಬ್ಬರು ನಿಯಂತ್ರಕರ ಮಧ್ಯೆ ಸಮನ್ವಯದ ಕೊರತೆಯಿಂದ ಎರಡು ವಿಮಾನಗಳು ಒಂದೇ ಸಮಯಕ್ಕೆ ಟೇಕಾಫ್ ಆಗಿದೆ.

ಎರಡು ವಿಮಾನಗಳು ಹತ್ತಿರದಲ್ಲೇ ಸಾಗುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ರೇಡಾರ್ ಕಂಟ್ರೋಲರ್ ಆಕಾಶದ ಮಧ್ಯೆ ದುರಂತ ಸಂಭವಿಸುವ ಬಗ್ಗೆ ಪೈಲಟ್‌ಗಳಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸಿದೆ. ಕೂಡಲೇ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನ ಎಡಕ್ಕೆ ತಿರುಗಿದರೆ ಭುವನೇಶ್ವರಕ್ಕೆ ತೆರಳುತ್ತಿದ್ದ ವಿಮಾನ ಬಲಕ್ಕೆ ತಿರುಗಿದೆ.

ರೇಡಾರ್ ಅಲರ್ಟ್ ಸಂದೇಶ ಕಳುಹಿಸುವರೆಗೂ ಎರಡೂ ವಿಮಾನಗಳು ಸುಮಾರು 3,000 ಅಡಿ ತಲುಪುವವರೆಗೂ ಪರಸ್ಪರ ಹತ್ತಿರದಲ್ಲಿ ಹಾರಾಟ ನಡೆಸುತ್ತಿದ್ದವು. ಆದರೆ ಪೈಲಟ್‌ಗಳು ಅಪಾಯದ ಅರಿವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದರು. ಅದೃಷ್ಟವಶಾತ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರೆಡಾರ್ ನಿಯಂತ್ರಕವು ಸಮಯಕ್ಕೆ ಸರಿಯಾಗಿ ಗುರುತಿಸಿ ಪೈಲಟ್‌ಗಳಿಗೆ ಎಚ್ಚರಿಕೆ ನೀಡಿದೆ.

ಈ ಗಂಭೀರ ಲೋಪದ ವಿಚಾರವನ್ನು ಸ್ಥಳೀಯ ಅಧಿಕಾರಿಗಳು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಕ್ಕೆ ವರದಿ ಮಾಡದೇ, ತನಿಖೆ ಮತ್ತು ಶಿಕ್ಷೆಯನ್ನು ತಪ್ಪಿಸುವ ಉದ್ದೇಶದಿಂದ ಮುಚ್ಚಿಡಲು ಪ್ರಯತ್ನಿಸಿದ್ದರು.

ಬೆಂಗಳೂರು-ಕೋಲ್ಕತ್ತಾ ವಿಮಾನವು 176 ಹಾಗೂ ಬೆಂಗಳೂರು-ಭುವನೇಶ್ವರ ವಿಮಾನವು 238 ಸೇರಿ ಒಟ್ಟು 426 ಪ್ರಯಾಣಿಕರನ್ನು ಒಯ್ಯುತ್ತಿದ್ದವು. ಸಂಭವನೀಯ ದುರಂತದ ಕುರಿತು ಪ್ರತಿಕ್ರಿಯಿಸಲು ಬೆಂಗಳೂರು ಎಟಿಸಿ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ವರದಿಯಾಗಿದೆ.

ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Latest Indian news

Popular Stories