ಮತದಾರರ ಮಾಹಿತಿ ಕಳವು: ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆಗೆ ಚುನಾವಣಾ ಆಯೋಗ ಆದೇಶ

ಬೆಂಗಳೂರು: ಮತದಾರರ ಮಾಹಿತಿ ಸಂಗ್ರಹಿಸಲು ಖಾಸಗಿ ಸಂಸ್ಥೆಯೊಂದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದ್ದು, ಇದರ ಬೆನ್ನಲ್ಲೇ ಚುನಾವಣಾ ಆಯೋಗ (ಇಸಿ) ಶುಕ್ರವಾರ ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆ ನಡೆಸಲು ಆದೇಶಿಸಿದೆ.

ಆದರೆ, ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಅವರು ಮಾಹಿತಿ ನೀಡಿ, ಎನ್‌ಜಿಒ, ಕೆಪಿಸಿಸಿ ಮತ್ತು ಮಾಧ್ಯಮ ವರದಿಗಳು ಸಲ್ಲಿಸಿದ ದೂರುಗಳ ಬಗ್ಗೆ ವಾಸ್ತವಿಕ ವರದಿಯನ್ನು ನೀಡುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ (ಆರ್‌ಸಿ) ಆಮ್ಲನ್ ಆದಿತ್ಯ ಬಿಸ್ವಾಸ್ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಸಮಸ್ಯೆಯ ಸೂಕ್ಷ್ಮತೆ ಮತ್ತು ಗಂಭೀರತೆಯ ದೃಷ್ಟಿಯಿಂದ, ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಆದ್ದರಿಂದ, ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸಿ ಶೀಘ್ರವಾಗಿ ಸಮಗ್ರ ವರದಿಯನ್ನು ಕಳುಹಿಸಲು ನಿಮಗೆ ಸೂಚಿಸಲಾಗಿದೆ ಎಂದು ಸಿಇಒ ಮೀನಾ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲಿ ಸಮನ್ವಯ ಟ್ರಸ್ಟ್‌ನ ದೂರು, ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಯಿಂದ ಬಂದ ಪತ್ರಗಳು, ವಾಟ್ಸಾಪ್ ಮೂಲಕ ಬಂದ ದೂರು ಮತ್ತು ಕೆಪಿಸಿಸಿ ದೂರುಗಳನ್ನು ಉಲ್ಲೇಖಿಸಲಾಗಿದೆ.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ (ಆರ್‌ಸಿ) ನೋಟಿಸ್‌ಗಳಿಗೆ ನೀಡಿದ ಪ್ರತಿಕ್ರಿಯೆಯನ್ನು ಅವಲಂಬಿಸಿ, ವರದಿಯನ್ನು ಸಲ್ಲಿಸಲು ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ದೂರುಗಳ ಆಧಾರದ ಮೇಲೆ, ಬೆಂಗಳೂರು ಪೊಲೀಸರು ಖಾಸಗಿ ಸಂಸ್ಥೆಯ ಅಕ್ರಮಗಳ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಸರ್ಕಾರ ಖಾಸಗಿ ಸಂಸ್ಥೆಯನ್ನು ರಕ್ಷಿಸುತ್ತಿದೆ: ಡಿಕೆ. ಶಿವಕುಮಾರ್ ಆರೋಪ
ಈ ನಡುವೆ ಈ ವಿಚಾರ ಸಂಬಂಧ ಶುಕ್ರವಾರವೂ ರಾಜಕೀಯ ಗದ್ದಲ ಮುಂದುವರಿದಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಹಿರಿಯ ನಾಯಕರನ್ನು ಒಳಗೊಂಡ ಕಾಂಗ್ರೆಸ್ ಹಿರಿಯ ನಾಯಕರ ನಿಯೋಗ ಶನಿವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದೆ.

ಇದು ಗಂಭೀರ ಅಪರಾಧವಾಗಿದ್ದು, ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಬಹುದಾದ ವಿಷಯವಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.

26 ಲಕ್ಷ ಮತದಾರರ ಹೆಸರನ್ನು ಅಳಿಸಿ 14 ಲಕ್ಷ ಹೆಸರು ಸೇರ್ಪಡೆ ಮಾಡಲಾಗಿದೆ. ತಮಗೆ ಮತ ಹಾಕದ ಮತದಾರರ ಹೆಸರನ್ನು ಅಳಿಸಿದ್ದಾರೆ. ನಮ್ಮ ಕಾರ್ಯಕರ್ತರು ಬಹಳ ಜಾಗರೂಕರಾಗಿರಬೇಕು ಎಂದಿದ್ದಾರೆ.

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು, ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವುದಾಗಿ ಭರವಸೆ ನೀಡಿ ಮುಖಂಡರಿಂದ ಹಣ ವಸೂಲಿ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಖಾಸಗಿ ಸಂಸ್ಥೆಯ ಅಧಿಕಾರಿಗಳನ್ನು ಸಿಎಂ ಹಾಗೂ ಸಚಿವರು ರಕ್ಷಿಸುತ್ತಿದ್ದಾರೆ. ”ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸರಕಾರ ಇಂತಹ ಕ್ರಮಗಳನ್ನು ಕೈಗೊಂಡಿದೆ. ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಆಗ್ರಹಿಸಿದರು.

ಈ ನಡುವೆ ಆರೋಪವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆರೋಪ ನಿರಾಕರಿಸಿದ್ದಾರೆ. ಹತಾಶೆಗೊಳಗಾಗಿ ಕಾಂಗ್ರೆಸ್ ಇಂತಹ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಿ, ಕಾಂಗ್ರೆಸ್ ಸುಳ್ಳು ಆರೋಪಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

Latest Indian news

Popular Stories