ಮತಾಂತರ ನಿಷೇಧ ಕಾಯಿದೆ ಬದಲು ಪಕ್ಷಾಂತರ ನಿಷೇಧದ ಪ್ರಬಲವಾದ ಕಾಯಿದೆ ತರಲಿ – ಸಿ.ಎಮ್ ಇಬ್ರಾಹಿಮ್

ಬೆಳಗಾವಿ: ಬಸವರಾಜ ಬೊಮ್ಮಾಯಿಯವರು ಹೇಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಹೋಗುತ್ತಿದ್ದಾರೆ, ಹೋಗುವ ಸಂದರ್ಭದಲ್ಲಿ ಒಳ್ಳೆ ಕೆಲಸ ಮಾಡಿ ಹೋಗಲಿ, ಯಾಕೆ ಗೂಬೆಯನ್ನು ತಲೆ ಮೇಲೆ ಕೂರಿಸಿಕೊಳ್ಳುತ್ತೀರಿ, ಮತಾಂತರ ನಿಷೇಧ ಕಾಯ್ದೆ ತಂದು ಗೂಬೆಯನ್ನು ತಲೆ ಮೇಲೆ ಕೂರಿಸಿಕೊಳ್ಳಬೇಡಿ ಎಂದು ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಂಇಎಸ್ ಸಂಘಟನೆ ನಿಷೇಧ ಬಗ್ಗೆ ಕಾಂಗ್ರೆಸ್ ನಲ್ಲಿ ದ್ವಂದ್ವ ನಿಲುವು ಏಕೆ ಎಂದು ಕೇಳಿದಾಗ, ಭೂ ಸುಧಾರಣೆ ಕಾಯ್ದೆ ಜಾರಿ ಮಾಡಲ್ಲ ಎಂದು ಸರ್ಕಾರ ಹೇಳಲಿ, ಎಲ್ಲ ಸಮಸ್ಯೆ ಒಂದು ಗಂಟೆಯಲ್ಲಿ ಪರಿಹಾರವಾಗುತ್ತದೆ. ಇಲ್ಲಿ ಕನ್ನಡಿಗರು ಭೂ ಮಾಲೀಕರು, ಮರಾಠಿಗರು ಒಕ್ಕಲುದಾರರು, ರಾಜ್ಯದ ಹಿತಕ್ಕೆ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ನಾವೆಲ್ಲರೂ ಭಾರತೀಯರು, ಆದರೆ ಆಯಾ ರಾಜ್ಯದಲ್ಲಿ ನೆಲೆಸಿರುವಾಗ ಆಯಾ ರಾಜ್ಯದ ಒಕ್ಕೂಟ, ಸಂಸ್ಕೃತಿಗೆ ಗೌರವ ನೀಡುವುದು, ಸ್ನೇಹ ಗೌರವದಿಂದ ಇರುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಒಳ್ಳೆಯದಲ್ಲ ಎಂದು ಪರಿಷತ್ ನಲ್ಲಿ ಹೇಳುತ್ತೇವೆ. ಇದು ಕ್ರೈಸ್ತರ ಮೇಲೆ ನಿಗಾ ಇಟ್ಟುಕೊಂಡು ಮಾಡಲಾಗುತ್ತಿದೆ. ಕ್ರೈಸ್ತ ಶಾಲೆಗಳಲ್ಲಿ ಓದಿ, ಕ್ರೈಸ್ತ ಆಸ್ಪತ್ರೆಗಳನ್ನು ಆರೋಗ್ಯ ಸೇವೆಗೆ ಬಳಸಿಕೊಂಡು ಹೊರಗೆ ಬಂದು ಬೈಯುವುದು ಯಾವ ನ್ಯಾಯ, ಇದು ಅನ್ಯಾಯ ಎಂದರು.

ವಿದೇಶಗಳಲ್ಲಿರುವ ಕನ್ನಡಿಗರಿಗೆ ಮತಾಂತರ ನಿಷೇಧ ಕಾಯ್ದೆಯಿಂದ ತೊಂದರೆಯಾಗುತ್ತದೆ. ಅವರು ಶಾಂತಿಯುತವಾಗಿ ಬದುಕಲು ಸಾಧ್ಯವೇ ಎಂದು ಕೇಳಿದರು.

ನಮ್ಮ ರಾಜ್ಯದ ಪೊಲೀಸರು ಸಮರ್ಥರಾಗಿದ್ದಾರೆ, ಪೊಲೀಸರಿಗೆ ಸರ್ಕಾರ ಸಂಪೂರ್ಣ ಅಧಿಕಾರ ನೀಡಬೇಕು. ಒಂದು ಗಂಟೆಯಲ್ಲಿ ನಿಯಂತ್ರಣ ಮಾಡಿ ತೋರಿಸುತ್ತಾರೆ ಎಂದರು.

ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋದರೆ ಕನಿಷ್ಠ 6 ವರ್ಷ ಮಂತ್ರಿಯಾಗುವಂತಿಲ್ಲ, ಯಾವುದೇ ಆಸೆ-ಆಕಾಂಕ್ಷೆಗಳಿಗೆ ಒಳಗಾಗದಂತೆ ತಡೆಯುವುದು ಒಳಿತು ಎಂದರು. ನ್ಯಾಯಾಲಯ ಮೊರೆ ಹೋಗಿ ವಿಡಿಯೊಗಳಿಗೆ ತಡೆ ತಂದಿದ್ದು, ತಡೆಯನ್ನು ತೆಗೆದುಹಾಕಲಿ, ಇಲ್ಲದಿದ್ದರೆ ನ್ಯಾಯಾಲಯವೇ ವಿಡಿಯೊದಲ್ಲಿ ಏನಿದೆ, ಯಾವ ಕಾರಣಕ್ಕೆ ಸ್ಟೇ ಕೊಟ್ಟಿದ್ದೀರಿ ಎಂದು ನೋಡಲಿ ಎಂದು ಕೇಳುತ್ತೇನೆ. ಸಾಧಕ-ಬಾಧಕ ನೋಡಿ ಸ್ಟೇ ಕೊಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇನೆ ಎಂದರು.

ಡೋಬಿ ಕ ಕುತ್ತಾ ಅನ್ನುವುದು ಆಡುಭಾಷೆ, ಗ್ರಾಮ್ಯ ಭಾಷೆ, ಅದನ್ನು ಮಡಿವಾಳ ಸಮುದಾಯದವರಿಗೆ ಕೆಲವರಿಗೆ ನೋವಾಗಿದೆ ಎಂದು ಗೊತ್ತಾಯಿತು, ನನ್ನ ಹೃದಯಕ್ಕೆ ಹತ್ತಿರವಾಗಿರುವ ಮಡಿವಾಳ ಸಮಾಜದವರಿಗೆ ನೋವಾಗಿದ್ದರೆ ಬೇಷರತ್ತಾಗಿ ಕ್ಷಮೆ ಕೇಳುತ್ತೇನೆ ಎಂದರು.

Latest Indian news

Popular Stories