ರಾಷ್ಟ್ರಪತಿ ಮುರ್ಮುರ ಜಾತಿ ಬಗ್ಗೆ ಪ್ರಚೋದನಕಾರಿ ಹೇಳಿಕೆ ಆರೋಪ; ಅರವಿಂದ್ ಕೇಜ್ರಿವಾಲ್, ಮಲ್ಲಿಕಾರ್ಜುನ ಖರ್ಗೆ, ಇತರರ ವಿರುದ್ಧ ದೂರು ದಾಖಲು

ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಾತಿಯನ್ನು ಉಲ್ಲೇಖಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ರಾಜಕೀಯ ನಾಯಕರ ವಿರುದ್ಧ ದೂರು ದಾಖಲಿಸಲಾಗಿದೆ.

ಕೇಜ್ರಿವಾಲ್, ಖರ್ಗೆ ಮತ್ತು ಇತರರು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ ಮತ್ತು ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಭಾರತ ಸರ್ಕಾರದ ಮೇಲೆ ಅಪನಂಬಿಕೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಟಿಸಿದ ವರದಿ ಪ್ರಕಾರ, ದೂರನ್ನು ಐಪಿಸಿಯ ಸೆಕ್ಷನ್ 121, 153A, 505 ಮತ್ತು 34 ಅಡಿಯಲ್ಲಿ ದಾಖಲಿಸಲಾಗಿದೆ.

ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಇತರ ವಿರೋಧ ಪಕ್ಷಗಳು ಗುರಿಯಾಗಿಸಿಕೊಂಡಿವೆ. ಕಾಂಗ್ರೆಸ್, ಸಿಪಿಐ, ಎಎಪಿ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ 20 ಪಕ್ಷಗಳು ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.

‘ನೂತನ ಸಂಸತ್ ಭವನದ ಉದ್ಘಾಟನೆ ಒಂದು ಮಹತ್ವದ ಸಂದರ್ಭವಾಗಿದೆ. ಸರ್ಕಾರವು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತಿದೆ ಎಂಬ ನಮ್ಮ ನಂಬಿಕೆಯ ಹೊರತಾಗಿಯೂ ಮತ್ತು ಹೊಸ ಸಂಸತ್ತು ನಿರ್ಮಿಸಿದ ನಿರಂಕುಶಾಧಿಕಾರದ ವಿಧಾನಕ್ಕೆ ನಮ್ಮ ಅಸಮ್ಮತಿಯ ಹೊರತಾಗಿಯೂ, ನಮ್ಮ ಭಿನ್ನಾಭಿಪ್ರಾಯಗಳನ್ನು ಹೇಳಲು ಮತ್ತು ಈ ಸಂದರ್ಭವನ್ನು ಗುರುತಿಸಲು ನಾವು ಮುಕ್ತರಾಗಿದ್ದೇವೆ’ ಎಂದು ವಿರೋಧ ಪಕ್ಷಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

Latest Indian news

Popular Stories