ಸಿ.ಎ ಪರೀಕ್ಷೆಯಲ್ಲಿ ಅಣ್ಣ-ತಂಗಿ ಜೋಡಿಗೆ ರ಼್ಯಾಂಕ್!

ಸಿಎ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 83,606 ಅಭ್ಯರ್ಥಿಗಳಲ್ಲಿ ಮಧ್ಯಪ್ರದೇಶದ ನಂದಿನಿ ಅಗರ್ವಾಲ್ ಎಂಬ ಹೆಣ್ಣುಮಗಳು 800ಕ್ಕೆ 614 ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾಳೆ. ಈಕೆಯ 21 ವರ್ಷದ ಅಣ್ಣ ಸಚಿನ್ ಅಗರ್ವಾಲ್ 18ನೇ ಸ್ಥಾನ ಗಳಿಸಿಕೊಂಡಿದ್ದು, ಈ ಮೂಲಕ ಅಣ್ಣ- ತಂಗಿ ಜೋಡಿ ದೇಶವೇ ತಲೆಯೆತ್ತಿ ನೋಡುವಂತ ಸಾಧನೆ ಮಾಡಿದ್ದಾರೆ.

ನಂದಿನಿ ಮತ್ತು ಸಚಿನ್ ಇಬ್ಬರೂ 2017ರಲ್ಲಿ ದ್ವಿತೀಯ ಪಿಯು ತೇರ್ಗಡೆಯಾಗಿದ್ದರು.ಬಾಲ್ಯದಲ್ಲಿ 2 ತರಗತಿಗಳನ್ನು ಓದದೇ ನೆರವಾಗಿ ಅಣ್ಣನ ಕ್ಲಾಸಿಗೇ ಸೇರಿಕೊಂಡಿದ್ದಳು. ಮುಂದೆ ಅಣ್ಣ ತಂಗಿ ಒಟ್ಟಿಗೇ ಓದಿ ಜತೆಜತೆಗೇ ಸಿಎ ಪಾಸ್ ಮಾಡಿದ್ದಾರೆ.

ಐಪಿಸಿಸಿ ಮತ್ತು ಸಿಎ ಎರಡೂ ಪರೀಕ್ಷೆಗಳಿಗೆ ನಾನು ಮತ್ತು ನನ್ನಣ್ಣ ಒಟ್ಟಿಗೆ ಓದಿಕೊಳ್ಳುತ್ತಿದ್ದೆವು. ಯಾವುದಾದರೂ ಪ್ರಶ್ನೆ ಪತ್ರಿಕೆ ಬಿಡಿಸಿದರೆ ನನ್ನ ಉತ್ತರಗಳನ್ನು ಅಣ್ಣ ಚೆಕ್ ಮಾಡುತ್ತಿದ್ದ. ನಾನು ಅಣ್ಣನ ಉತ್ತರ ಪತ್ರಿಕೆಯನ್ನು ನೋಡುತ್ತಿದ್ದೆ. ಎಂದಾದರೂ ನಾನು ಭರವಸೆ ಕಳೆದುಕೊಂಡೆ ಅನಿಸಿದರೆ ನನ್ನ ಅಣ್ಣ ಹೆಗಲಾಗಿ ಧೈರ್ಯ ತುಂಬುತ್ತಿದ್ದ ಎಂದು PwC ಎಂಬ ಸಂಸ್ಥೆಯಲ್ಲಿ ಆರ್ಟಿಕಲ್​ಶಿಪ್ ಮಾಡುತ್ತಿರುವ ನಂದಿನಿ ಅಗರ್ವಾಲ್ ತಮ್ಮ ಓದಿನ ದಿನಗಳನ್ನು ನೆನೆಯುತ್ತಾರೆ.

ಕೊವಿಡ್ ಪ್ಯಾಂಡಮಿಕ್ ಬಂತು. ಈ ಸಮಯ ಓದಿಗಾಗಿ ಇನ್ನಷ್ಟು ಸಮಯವನ್ನು ಮೀಸಲಿಡಲು ನಮಗೆ ಅವಕಾಶ ಮಾಡಿಕೊಟ್ಟಿತು. ಲಾಕ್​ಡೌನ್​ನಲ್ಲಿ ಮನೆಯಲ್ಲಿ ಎಷ್ಟು ಕಿತಾಪತಿ ಮಾಡಿದ್ದೆವೊ, ಅದಕ್ಕಿಂತ ಹೆಚ್ಚು ಅಧ್ಯಯನ ನಡೆಸಿದ್ದೇವೆ. ತಂಗಿ ನಂದಿನಿ ತುಂಬಾ ಒಳ್ಳೆಯ ಅಂಕ ಪಡೆಯುತ್ತಾಳೆ ಎಂಬ ಭರವಸೆ ನನಗಿತ್ತು ಎನ್ನುತ್ತಲೇ ಸಚಿನ್ ಆಗರ್ವಾಲ್ ಮುಗುಳ್ನಕ್ಕರು. ಸದ್ಯ ಅವರು ಗುರುಗ್ರಾಮ ಮೂಲದ One Poiny Advisors ಎಂಬ ಸಂಸ್ಥೆಯಲ್ಲಿ ಆರ್ಟಿಕಲ್​ಶಿಪ್ ಮಾಡುತ್ತಿದ್ದಾರೆ.

ಈ ಸಾಧಕ ಅಣ್ಣ ತಂಗಿಯ ತಂದೆ ನರೇಶ್ ಚಂದ್ರ ಟ್ಯಾಕ್ಸ್ ಪ್ರಾಕ್ಟಿಸಿಯರ್ ಆಗಿ ಕೆಲಸ ಮಾಡುತ್ತಾರೆ. ತಾಯಿ ಡಿಂಪಲ್ ಗುಪ್ತಾ ಗೃಹಿಣಿ. ತಂದೆ ತಾಯಂದಿರ ಪ್ರೋತ್ಸಾಹ ಮತ್ತು ಭರವಸೆಯಿಂದಲೆ ನಾವು ಯಶ ಕಂಡಿದ್ದೇವೆ ಎನ್ನಲು ನಂದಿನಿ ಮತ್ತು ಸಚಿನ್ ಇಬ್ಬರೂ ಮರೆಯುವುದಿಲ್ಲ. ‘ಹುಡುಗಿಯರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಮನಸು ಮಾಡುವುದು ಕಡಿಮೆ. ಅದರಲ್ಲೂ ಒಂದೆರಡು ಬಾರಿ ಅಂತಹ ಪರೀಕ್ಷೆಗಳಲ್ಲಿ ವಿಫಲರಾದರೆ ಮನೆಯಲ್ಲಿ ಮತ್ತೆ ಪರೀಕ್ಷೆ ಬರೆಯುವುದು ಬೇಡ ಎನ್ನುವ ಸಾಧ್ಯತೆಗಳೇ ಇವೆ. ಹುಡುಗಿಯರ ಕನಸಿಗೆ ಪೋಷಕರು ರೆಕ್ಕೆಯಾಗಿ ಕಾಯಬೇಕು ಎನ್ನುತ್ತಾರೆ ನಂದಿನಿ ಅಗರ್ವಾಲ್.

Latest Indian news

Popular Stories