ಹಣ ಒದಗಿಸಲು ಆಗುತ್ತಿಲ್ಲ ಎಂದಾದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ಹೊಸದಾಗಿ ಘೋಷಿಸಿರುವ 50 ತಾಲ್ಲೂಕುಗಳಲ್ಲಿ ಮಿನಿ ವಿಧಾನ ಸೌಧ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹೊಸ ತಾಲೂಕುಗಳಿಗೆ ಹಣ ಒದಗಿಸಲು ಆಗುತ್ತಿಲ್ಲ ಎಂದಾದರೆ ಆ ಎಲ್ಲಾ ಹೊಸ ತಾಲೂಕುಗಳನ್ನು ರದ್ದುಪಡಿಸಿಬಿಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.

ರಾಜ್ಯ ಸರ್ಕಾರ 2017-18ನೇ ಸಾಲಿನ ಬಜೆಟ್ ನಲ್ಲಿ ಹೊಸದಾಗಿ ಘೋಷಣೆ ಮಾಡಿದ 50 ತಾಲೂಕುಗಳಲ್ಲಿ ತಾಲ್ಲೂಕು ಕೇಂದ್ರ ಕಚೇರಿ ಸೇರಿದಂತೆ ಇತರ ಕಚೇರಿಗಳು ಸ್ಥಾಪನೆಯಾಗಿಲ್ಲ ಎಂದು ಆರೋಪಿಸಿ ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ “ಹಣಕಾಸಿನ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಹೊಸ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳ ಸ್ಥಾಪನೆ ಆಗಿಲ್ಲ. ಕಚೇರಿಗಳ ಸ್ಥಾಪನೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಹಣಕಾಸು ಇಲಾಖೆ ಹೇಳಿದೆ ಎಂದರು.

ಎಲ್ಲಾ 50 ತಾಲೂಕುಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಕೋವಿಡ್ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸರಿಯಿಲ್ಲ. ತೆರಿಗೆ ಸಂಗ್ರಹದಲ್ಲಿ ಗಣನೀಯ ಕಡಿತವಾಗಿದೆ. ಈ ನಿಟ್ಟಿನಲ್ಲಿ ಹಂತ-ಹಂತವಾಗಿ ಹಣಕಾಸಿನ ನೆರವು ನೀಡಲು ರಾಜ್ಯ ಸರ್ಕಾರ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

Latest Indian news

Popular Stories