ನವದೆಹಲಿ: ಆರ್ಥಿಕತೆ ಕುರಿತು ಕೇಂದ್ರ ಸರ್ಕಾರ ಹೊರಡಿಸಲಿರುವ ಶ್ವೇತಪತ್ರಕ್ಕೆ ಪ್ರತಿಯಾಗಿ ಕಪ್ಪು ಪತ್ರವನ್ನು ಕಾಂಗ್ರೆಸ್ ಗುರುವಾರ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕಪ್ಪು ಪತ್ರ ಬಿಡುಗಡೆ ಮಾಡಿದ್ದು, ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
10 ವರ್ಷಗಳ ಮೋದಿ ಸರ್ಕಾರದ ಅವಧಿಯ ವೈಫಲ್ಯಗಳನ್ನು ಪಟ್ಟಿ ಮಾಡಿರುವ ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಿದ್ದಾರೆ.
ಕಪ್ಪು ಪತ್ರಕ್ಕೆ ಹತ್ತು ವರ್ಷಗಳ ಅನ್ಯಾಯದ ಕಾಲ ಎಂದು ಹೆಸರಿಸಲಾಗಿದೆ. ಪಕ್ಷದ ಪ್ರಕಾರ, ಕಪ್ಪು ಪತ್ರದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಮತ್ತು ರೈತರ ಸಂಕಷ್ಟದ ಕುರಿತು ಪಟ್ಟಿ ಮಾಡಿರುವುದು ಕಂಡು ಬಂದಿದೆ.
ಕಪ್ಪು ಪತ್ರ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ಅವರು, “ನಾವು ಸರ್ಕಾರದ ವಿರುದ್ಧ ‘ಕಪ್ಪು ಪತ್ರ’ ಬಿಡುಗಡೆ ಮಾಡುತ್ತಿದ್ದೇವೆ, ಏಕೆಂದರೆ ಅವರು ಸಂಸತ್ತಿನಲ್ಲಿ ಮಾತನಾಡುವಾಗ ಅವರು ಯಾವಾಗಲೂ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ತಮ್ಮ ವೈಫಲ್ಯಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅವರು ಆರ್ಥಿಕತೆಯಲ್ಲಿ ವಿಫಲರಾಗಿದ್ದಾರೆ” ಎಂದು ಕಿಡಿಕಾರಿದರು.
ನಿರುದ್ಯೋಗ ಈ ದೇಶದ ಬಹುದೊಡ್ಡ ಸಮಸ್ಯೆ, ಅದರ ಬಗ್ಗೆ ಅವರು (ಮೋದಿ) ಮಾತನಾಡುವುದೇ ಇಲ್ಲ. “ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ ಉದ್ಯೋಗಗಳ ಬಗ್ಗೆ ಪ್ರಧಾನಿ ಮಾತನಾಡಲಿಲ್ಲ, ನೀವು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ನೆಹರೂ ಅವರನ್ನು ನಿಂದಿಸುತ್ತಿದ್ದೀರಿ, ಆದರೆ, ನಿಮ್ಮ ಸ್ವಂತ MNREGA ಬಗ್ಗೆ ಮಾತನಾಡಿ, ಅದಕ್ಕೆ ಹಣ ಬಿಡುಗಡೆಯಾಗಿಲ್ಲ, ಅದು ಗ್ರಾಮೀಣ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದರು. ಅಲ್ಲದೆ, ಅನ್ಯ ಸರ್ಕಾರಗಳ ರಾಜ್ಯಗಳ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ಈ ವೇಳೆ ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ರಾಜ್ಯಸಭಾ ಸಂಸದ ನಾಸಿರ್ ಹುಸೇನ್ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಇದ್ದರು.
2014 ರಲ್ಲಿ ಅಧಿಕಾರಕ್ಕೆ ಬಂದ ನಂತರದ ಬಿಜೆಪಿ ಸರ್ಕಾರದ ಶ್ವೇತಪತ್ರದ ಹಿಂದೆ ಕಾಂಗ್ರೆಸ್‍ನ ಈ ಕ್ರಮವು ಬಂದಿತು. ಫೆಬ್ರವರಿ 1 ರಂದು ತನ್ನ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರವು ಉಭಯ ಸದನಗಳಲ್ಲಿ ಶ್ವೇತಪತ್ರ ಮಂಡಿಸಲಿದೆ ಎಂದು ಘೋಷಿಸಿದ್ದರು.