ಸೂರತ್‌ | 11 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ | 600 ಕ್ಕೂ ಹೆಚ್ಚು ಮನೆಗಳನ್ನು ಶೋಧಿಸಿ ಇಬ್ಬರು ಕಿರಾತಕರ ಬಂಧನ

ಸೂರತ್: ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ವಾರದ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ನಂತರ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಈ ಭೀಕರ ಅಪರಾಧಕ್ಕೆ ಸಂಬಂಧಿಸಿದಂತೆ ಮೂಲತಃ ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಮಾರ್ಚ್ 18 ರಂದು ಸಂತ್ರಸ್ತೆ ತನ್ನ ಮನೆಯಿಂದ ನಾಪತ್ತೆಯಾದ ನಂತರ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 363 (ಅಪಹರಣ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಆಕೆಯ ಪತ್ತೆಗೆ ಅನೇಕ ತಂಡಗಳನ್ನು ರಚಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ (ಸೂರತ್ ಗ್ರಾಮಾಂತರ) ಹಿತೇಶ್ ಜೋಯ್ಸರ್ ಹೇಳಿದ್ದಾರೆ. 

ಮಾರ್ಚ್ 23 ರಂದು, ಬಾಲಕಿಯ ಅರೆಬೆತ್ತಲೆ ದೇಹವನ್ನು ಅವಳು ವಾಸಿಸುತ್ತಿದ್ದ ಪ್ರದೇಶದ ಸಮೀಪವಿರುವ ಪೊದೆಗಳಲ್ಲಿ ಎಸೆಯಲಾಗಿತ್ತು ಎಂದು ಅವರು ಹೇಳಿದರು.

ಕೊಲೆ ಮಾಡುವ ಮೊದಲು ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು ಎಂದು ವೈದ್ಯರು ಖಚಿತಪಡಿಸಿದ್ದಾರೆ ಎಂದು ಜೋಯ್ಸರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

“ಆರೋಪಿಗಳ ಪತ್ತೆಗಾಗಿ 15 ಕ್ಕೂ ಹೆಚ್ಚು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. 600 ಕ್ಕೂ ಹೆಚ್ಚು ಮನೆಗಳನ್ನು ಶೋಧಿಸಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಅವರು ನಂತರ ಅಪರಾಧವನ್ನು ಒಪ್ಪಿಕೊಂಡಿದ್ದಾರೆ” ಎಂದು ಅವರು ಹೇಳಿದರು.

ಇಬ್ಬರು ಬಾಲಕಿಯ ನೆರೆಹೊರೆಯಲ್ಲಿ ವಾಸಿಸುತ್ತಿದ್ದರು. ಅವಳು ಕಾಣೆಯಾದ ದಿನದಂದು ಕೆಲಸಕ್ಕೆ ಹೋಗಿದ್ದರು ಎಂದು ಎಸ್ಪಿ ಹೇಳಿದರು.

ಆರೋಪಿಗಳಾದ ಉತ್ತರ ಪ್ರದೇಶದ ರಾಯ್ಬರೇಲಿ ಮೂಲದ ದೀಪಕ್ ಕೋರಿ (23) ಮತ್ತು ಜಾರ್ಖಂಡ್‌ನ ಪಲಮು ನಿವಾಸಿ ಅನುಜ್ ಪಾಸ್ವಾನ್ (23) ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಅತ್ಯಾಚಾರ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಪ್ರಕರಣ ಹಾಗೂ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಂತರ ಸಿಕ್ಕಿಬೀಳುವ ಭಯದಿಂದ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Latest Indian news

Popular Stories