ವಿಶ್ವ ವಿಜೇತ ಟೀಂ ಇಂಡಿಯಾಗೆ 125 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ

ಭಾರತ ಕ್ರಿಕೆಟ್ ತಂಡ 9ನೇ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ರೋಹಿತ್ ಪಡೆ ದಾಖಲೆಯ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಈ ಚಾಂಪಿಯನ್ ಪ್ರದರ್ಶನಕ್ಕೆ ಟೀಂ ಇಂಡಿಯಾ ಐಸಿಸಿಯಿಂದ ಒಟ್ಟಾರೆಯಾಗಿ ಬರೋಬ್ಬರಿ 22.76 ಕೋಟಿ ರೂಗಳನ್ನು ಬಹುಮಾನದ ರೂಪದಲ್ಲಿ ಪಡೆದುಕೊಂಡಿತ್ತು. ಇದೀಗ ವಿಶ್ವ ಕ್ರಿಕೆಟ್​ನ ಬಿಗ್ ಬಾಸ್ ಎನಿಸಿಕೊಳ್ಳುವ ಬಿಸಿಸಿಐ ತನ್ನ ಚಾಂಪಿಯನ್ ತಂಡಕ್ಕೆ ಭಾರಿ ಗಾತ್ರದ ಬಹುಮಾನ ಘೋಷಿಸಿ, ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ. ಒಂದಲ್ಲ, ಎರಡಲ್ಲ ಬಿಸಿಸಿಐ ಬರೋಬ್ಬರಿ 125 ಕೋಟಿ ರೂಗಳನ್ನು ಬಹುಮಾನವಾಗಿ ಘೋಷಿಸಿದೆ.

9ನೇ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಕ್ಕೆ ದಾಖಲೆಯ 125 ಕೋಟಿ ಬಹುಮಾನವನ್ನು ಘೋಷಿಸಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್​ ಶಾ, ಚಾಂಪಿಯನ್ ಭಾರತ ತಂಡಕ್ಕೆ 125 ಕೋಟಿ ರೂಗಳನ್ನು ಬಹುಮಾನವಾಗಿ ಘೋಷಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಪಂದ್ಯಾವಳಿಯುದ್ದಕ್ಕೂ ತಂಡವು ಪ್ರತಿಭೆ, ದೃಢತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳಿಗೆ ಅಭಿನಂದನೆಗಳು ಎಂದು ಜಯ್ ಶಾ ಬರೆದುಕೊಂಡಿದ್ದಾರೆ.

ವಾಸ್ತವವಾಗಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಟೀಂ ಇಂಡಿಯಾಗೆ ದಾಖಲೆಯ ಮೊತ್ತವನ್ನು ಬಹುಮಾನವನ್ನಾಗಿ ಘೋಷಿಸುವ ಮೂಲಕ ಬಿಸಿಸಿಐ ಇಡೀ ವಿಶ್ವ ಕ್ರಿಕೆಟ್​ ಅಚ್ಚರಿಗೊಳ್ಳುವಂತೆ ಮಾಡಿದೆ. ಈ ಹಿಂದೆ ಯಾವ ಚಾಂಪಿಯನ್ ತಂಡಕ್ಕೂ ಈ ಗಾತ್ರದ ಬಹುಮಾನ ಸಿಕ್ಕಿರಲಿಲ್ಲ. ಪ್ರಸ್ತುತ ಪರಿಸ್ಥಿತಿ ನೋಡಿದರೆ ಮುಂದೆಯೂ ಸಿಗುವ ಸಾಧ್ಯತೆಗಳಿಲ್ಲ. ಒಟ್ಟಾರೆ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದ ಟೀಂ ಇಂಡಿಯಾ ಹಾಗೂ ತಂಡದ ಸಹಾಯಕ ಸಿಬ್ಬಂದಿಗಳಿಗೆ ಒಟ್ಟು 125 ಕೋಟಿ ರೂಗಳನ್ನು ಬಹುಮಾನವನ್ನಾಗಿ ಘೋಷಿಸಿಲಾಗಿದೆ. ಇದೇ ಟೀಂ ಇಂಡಿಯಾ ಟಿ20 ವಿಶ್ವಕಪ್​ನ ಚೊಚ್ಚಲ ಆವೃತ್ತಿಯನ್ನು ಗೆದ್ದಾಗ ಬಿಸಿಸಿಐ ನೀಡಿದ ಬಹುಮಾನಕ್ಕೂ ಈಗ ನೀಡಿರುವ ಬಹುಮಾನಕ್ಕೂ ಭಾರಿ ಅಂತರವಿದೆ.

ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮೊದಲ ಟಿ20 ವಿಶ್ವಕಪ್ ಆವೃತ್ತಿಯನ್ನು ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಮಣಿಸಿದ್ದ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 2 ಕೋಟಿ ರೂಪಾಯಿ ನಗದು ಬಹುಮಾನ ನೀಡಿತ್ತು.

Latest Indian news

Popular Stories