ಬೆಂಗಳೂರು: ರಾಜ್ಯದ ಕರಾವಳಿ ಸಹಿತ ಕೆಲವು ಭಾಗಗಳಿಗೆ ಮುಂಗಾರು ಪ್ರವೇಶಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ರವಿವಾರ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತರನ್ನು ರಾಯಚೂರಿನ ದೇವದುರ್ಗದ ಗೆಜ್ಜೆಬಾವಿ ದೊಡ್ಡಿಯ ಮೌನೇಶ ನಿಂಗಪ್ಪ (45), ಕಡೂರಿನ ತರೀಕೆರೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ಮುಖೇಶ್ (33) ಎಂದು ಗುರುತಿಸಲಾಗಿದೆ.
ರವಿವಾರ ಮುಂಗಾರಿನ ಉತ್ತರ ಸೀಮಾರೇಖೆ (ಎನ್‌ಎಲ್‌ಎಂ)ಯು ರತ್ನಗಿರಿ, ಶಿವಮೊಗ್ಗ, ಹಾಸನ, ಧರ್ಮಪುರಿ ಮತ್ತು ಶ್ರೀಹರಿಕೋಟಾವರೆಗೆ ಆವರಿಸಿದೆ. ಮುಂದಿನ ಎರಡು ದಿನಗಳಲ್ಲಿ ರಾಜ್ಯವನ್ನು ಪೂರ್ಣಪ್ರಮಾಣದಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಕಡೆ ಸೋಮವಾರದಿಂದ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನಲ್ಲಿ ಈಗಾಗಲೇ ಮಳೆ ಸುರಿಯುತ್ತಿದೆ. ಕರಾವಳಿಯಲ್ಲೂ ಹೆಚ್ಚಿನ ಮಳೆಯಾಗಲಿದೆ. ರಾಜ್ಯದಲ್ಲಿ ನೈಋತ್ಯ ದಿಕ್ಕಿನಿಂದ ಗಾಳಿ ಬೀಸುತ್ತಿದ್ದು, ಸಾಮಾನ್ಯವಾಗಿ ಇದು ಮುಂಗಾರು ಪ್ರವೇಶಕ್ಕೆ ಮುನ್ನ ಬೀಸುತ್ತದೆ ಎಂದು ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.
ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಸೇರಿದಂತೆ ಕೆಲವೆಡೆ ಗಾಳಿಯ ವೇಗವು ತಾಸಿಗೆ 40ರಿಂದ 50 ಕಿ.ಮೀ ಇರಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ.