ಮಂಡ್ಯ: 2024 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬೆಂಗಳೂರಿನಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ ಎಂಬ ಸುಮಲತಾ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ಎನ್ನುವುದು 2019ರ ಲೋಕಸಭಾ ಚುನಾವಣೆಯಲ್ಲಿಯೇ ಪ್ರಾರಂಭವಾಗಿದೆ ಎಂದರು.
ರೈತ ಸಂಘ, ಕಾಂಗ್ರೆಸ್, ಬಿಜೆಪಿಯವರು ಕೇವಲ ಲೋಕಸಭಾ ಚುನಾವಣೆ ಅಷ್ಟೇ ಅಲ್ಲ ವಿಧಾನಪರಿಷತ್ ಚುನಾವಣೆಯಲ್ಲಿ ಯಾರು ಹೊಂದಾಣಿಕೆ ರಾಜಕಾರಣ ಮಾಡಿದ್ರು ಎನ್ನುವುದು ಇಡೀ ರಾಜ್ಯವೇ ನೋಡಿದೆ. ಹೊಂದಾಣಿಕೆ ಬಗ್ಗೆ ಸಂಸದರಿಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಮಂಡ್ಯ ಸಂಸದರು 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅಲ್ಲ, ಬೆಂಗಳೂರಿನಲ್ಲಿ ಸ್ಪರ್ಧೆ ಮಾಡಬೇಕು ಎಂದು ಚರ್ಚಿಸುತ್ತಿದ್ದಾರೆ. ಮೊದಲು ಅದರ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಇನ್ನೂ ಸ್ಯಾಂಟ್ರೋ ರವಿ ಬಂಧನ ಕುರಿತಂತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸ್ಯಾಂಟ್ರೋ ರವಿ ಸರ್ಕಾರದ ಕೆಲವು ಸಚಿವರ ಜೊತೆಗಿನ ನಂಟಿನ ಬಗ್ಗೆ ನಮ್ಮ ತಂದೆ ಸಂಪೂರ್ಣ ಮಾಹಿತಿ ಬಿಟ್ಟಿಟ್ಟಿದ್ದಾರೆ. ಬಿಜೆಪಿಯವರು ಸ್ಯಾಂಟ್ರೋ ರವಿ ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ. ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.